Advertisement

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

08:51 PM Jan 20, 2022 | Team Udayavani |

ಗುಲ್ವಾಡಿ: ಗ್ರಾಮಸ್ಥರಿಗೆ ತಳಮಟ್ಟದ ಕಂದಾಯ ಇಲಾಖೆಯ ಎಲ್ಲ ಕೆಲಸ- ಕಾರ್ಯಗಳನ್ನು ಕಾರ್ಯಗತಗೊಳಿಸಿ ಕೊಡಬೇಕಾದ ಗುಲ್ವಾಡಿ ಗ್ರಾಮದ ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕ ಎರಡು ಹುದ್ದೆಗಳೂ ಖಾಲಿಯಿವೆ. ಇಲ್ಲಿಗೆ ಬೇರೆ ಕಡೆಯ ಗ್ರಾಮ ಕರಣಿಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಗ್ರಾಮ ಕರಣಿಕರ ಕಚೇರಿ ವಾರದಲ್ಲಿ ಎರಡು ದಿನ ಮಾತ್ರ ತೆರೆದಿರುತ್ತದೆ.

Advertisement

ಗುಲ್ವಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಗ್ರಾಮ ಕರಣಿಕರ ಕಚೇರಿಯಲ್ಲಿ ಕಳೆದ 6 ತಿಂಗಳಿನಿಂದ ಖಾಯಂ ಗ್ರಾಮ ಕರಣಿಕರ ಹುದ್ದೆ ಖಾಲಿಯಿದೆ. ಈಗ ಪ್ರಭಾರ ನೆಲೆಯಲ್ಲಿ ಹಟ್ಟಿಯಂಗಡಿ ಹಾಗೂ ಚಿತ್ತೂರು ಗ್ರಾಮ ಕರಣಿಕರಿಗೆ ಗುಲ್ವಾಡಿಯನ್ನು ಸಹ ಹೆಚ್ಚುವರಿಯಾಗಿ ವಹಿಸಲಾಗಿದೆ. ಇನ್ನು ಗ್ರಾಮ ಸಹಾಯಕರ ಹುದ್ದೆ ಖಾಲಿಯಾಗಿ ಒಂದೂವರೆ ವರ್ಷ ಕಳೆದಿದೆ. ಇದರಿಂದಾಗಿ ವಾರದಲ್ಲಿ ಬುಧವಾರ ಹಾಗೂ ಶುಕ್ರವಾರ ಈ ಎರಡು ದಿನ ಬಿಟ್ಟರೆ ಬಾಕಿ ಎಲ್ಲ ದಿನ ಗ್ರಾಮ ಕರಣಿಕರ ಬೀಗ ಹಾಕುವಂತಾಗಿದೆ.

ಗ್ರಾಮಸ್ಥರ ಪರದಾಟ :

ಗ್ರಾಮ ಕರಣಿಕರ ಕಚೇರಿಯು ಬಹುತೇಕ ದಿನ ಬೀಗ ಹಾಕಿಯೇ ಇರುವುದರಿಂದ ಜಾಗದ ವಿಚಾರ, ಜಾತಿ, ಜನನ ಪ್ರಮಾಣ ಪತ್ರ, ವಿವಿಧ ಪಿಂಚಣಿ, ವೃದ್ಧಾಪ್ಯ ವೇತನ ಸಹಿತ ಅನೇಕ ಮಾಸಾಶನ ಕಾರ್ಯಗಳಿಗೆಲ್ಲ ಬಂದು ದಿನವಿಡೀ ಕಾದು, ವಾಪಾಸು ತೆರಳುವಂತಹ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ. ವಾರದಲ್ಲಿ ಎರಡು ದಿನ ಕಚೇರಿಗೆ ಗ್ರಾಮ ಕರಣಿಕರು ಬಂದರೂ, ಅವರು ಆ ದಿನ ಸಭೆ, ಸ್ಥಳ ಪರಿಶೀಲನೆ ಸಹಿತ ಅನ್ಯ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವುದರಿಂದ ಕಚೇರಿ ಕೆಲಸಕ್ಕಾಗಿ ಬಂದ ಗ್ರಾಮಸ್ಥರಿಗೆ ಸಿಗದಂತಾಗಿದೆ. ಗ್ರಾಮ ಸಹಾಯಕರ ಹುದ್ದೆಯೂ ಖಾಲಿ ಇರುವುದರಿಂದ ವೃದ್ಧರು, ಮಹಿಳೆಯರು, ಅಶಕ್ತರು ಕಚೇರಿ ಕೆಲಸದ ವಿಚಾರದಲ್ಲಿ ಪರದಾಡುವಂತಾಗಿದೆ.

ಗುಲ್ವಾಡಿಯಲ್ಲಿ ಗ್ರಾಮ ಕರಣಿಕರ ಕಚೇರಿಗೆ ಬಹುತೇಕ ಎಲ್ಲ ದಿನ ಬೀಗ ಹಾಕಿರುವುದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಬೆಳಗ್ಗಿನಿಂದ ಸಂಜೆಯವರೆಗೂ ಬಂದು ಕಾಯುವಂತಹ ಪರಿಸ್ಥಿತಿಯಿದೆ. ಅನೇಕ ಬಾರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ, ಖಾಯಂ ಗ್ರಾಮ ಕರಣಿಕರು ಹಾಗೂ ಗ್ರಾಮ ಸಹಾಯಕರನ್ನು ನಿಯೋಜಿಸಿಲ್ಲ.  ಸುಧೀಶ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಗುಲ್ವಾಡಿ ಗ್ರಾ.ಪಂ.

Advertisement

ಗ್ರಾಮ ಕರಣಿಕರ ಕೊರತೆಯಿಂದಾಗಿ ಈ ರೀತಿಯ ತೊಂದರೆಯಾಗುತ್ತಿದ್ದು, ಈಗ ಹೊಸದಾಗಿ ಎರಡು ಗ್ರಾಮ ಕರಣಿಕರನ್ನು ನೀಡಿದ್ದು, ಅವರನ್ನು ಗುಲ್ವಾಡಿ ಸಹಿತ ತುರ್ತು ಅಗತ್ಯ ಇರುವ ಕಡೆಗಳಿಗೆ ಶೀಘ್ರ ವ್ಯವಸ್ಥೆ ಮಾಡಲಾಗುವುದು.  ಕಿರಣ್‌ ಜಿ. ಗೌರಯ್ಯ, ಕುಂದಾಪುರ ತಹಶೀಲ್ದಾರ್‌

-ಪ್ರಶಾಂತ್‌ ಪಾದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next