ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು-1, ಕರ್ನಾಟಕ-1 ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲಿ ಗ್ರಾಮ-1 ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ಗ್ರಾಮ-1 ಕೇಂದ್ರಗಳು ಸರ್ಕಾರದ ವಿವಿಧ ಯೋಜನೆಗಳ, ರಾಜ್ಯದ ವಿವಿಧ ಕೃಷಿ ಮಾರುಕಟ್ಟೆ, ಮಂಡಿ ದರಗಳ ಪ್ರಚಾರ ಮಾಡುವುದರ ಜೊತೆಗೆ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಿದೆ.
ರಾಜ್ಯದ ನಾಗರಿಕರು ಜಾಲತಾಣದ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಮಾಹಿತಿ ಕಣಜ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನ ಗೊಳಿಸಲಾಗುವುದು. ಈ ಏಕರೂಪ ತಂತ್ರಾಂಶ ಎಲ್ಲ ಇಲಾಖೆ, ಸಂಸ್ಥೆಗಳಿಗೆ ವಿಸ್ತರಿಸಲಾಗುವುದು. ಸಕಾಲ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ನೀಡಲಾಗುವುದು.
ಸಾರ್ವಜನಿಕರಿಗೆ ಒದಗಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ತಕ್ಷಣ ಒದಗಿಸುವ ಸಿದ್ಧ-ಸೇವೆ ಯೋಜನೆ ಯನ್ನು ರೂಪಿಸಿ ಈ ಸಾಲಿನಿಂದ ಅನು ಷ್ಠಾನ ಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಮೂರು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಜನರು ತಮ್ಮ ದೈನಂದಿನ ಬದುಕಿನಲ್ಲಿ ಸರ್ಕಾರದಿಂದ ಪಡೆಯುವ ವಿವಿಧ ಸೇವೆಗಾಗಿ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವುದಲ್ಲದೆ, ಹೆಚ್ಚೆಚ್ಚು ಸೇವೆಗಳನ್ನು ಸಕಾಲ ಯೋಜನಾ ವ್ಯಾಪ್ತಿಗೆ ತರುವ ಮೂಲಕ ಜನರಿಗೆ ಆಗುವ ಅನಾನೂಕುಲ ತಪ್ಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ, ಸಾರ್ವಜನಿಕರ ದೂರು ಸ್ವೀಕರಿಸಿ, ಕುಂದುಕೊರತೆ ನಿವಾರಿಸಲೂ ಸಹ ಆದ್ಯತೆ ನೀಡಲಾಗುವುದು. ನಾಗರಿಕ ಸ್ನೇಹಿ ಸೇವಾ ಪೂರೈಕೆ ವ್ಯವಸ್ಥೆಯನ್ನು ಗ್ರಾಮ ಮಟ್ಟದ ವರೆಗೆ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.
ಬೆಂಗಳೂರಿನ ಆಯ್ದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಜನಸೇವಕ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಹಾಗೂ ರಾಜ್ಯ ಎಲ್ಲ ಮಹಾನಗರ ಪಾಲಿಕೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯ ಸೇವಾ ವೆಚ್ಚದಲ್ಲಿ ವಿಸ್ತರಿಸಲು ನಿರ್ಧರಿಸಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.