ಮುಂಬಯಿ: ವಿಕ್ರೋಲಿ ಕನ್ನಡ ಸಂಘ ವತಿಯಿಂದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಸೆ. 23ರಂದು ವಿಕ್ರೋಲಿ ಪೂರ್ವದ ಠಾಗೋರ್ ನಗರ ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾ ಗೃಹದಲ್ಲಿ ನಡೆಯಿತು.
ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂ ಸುಂದರ್ ಶೆಟ್ಟಿ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ವಿಕ್ರೋಲಿ ಕನ್ನಡ ಸಂಘವು ಸ್ಥಾಪನೆಯ ದಿನದಿಂದ ಯಕ್ಷಗಾನ ಕಲೆಗೆ ವಿಶೇಷವಾದ ಪ್ರೋತ್ಸಾಹವನ್ನು ನೀಡುತ್ತಿದೆ. ಕಲೆಯ ಉಳಿಸಿ-ಬೆಳೆಸುವ ದೃಷ್ಟಿಯಿಂದ ಇಲ್ಲಿ ಯಕ್ಷಗಾನ ತರಬೇತಿಯು ನಿರಂತರವಾಗಿ ನಡೆಯುತ್ತಿತ್ತು. ಆದರೆ ಪ್ರಸ್ತುತ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ತರಬೇತಿ ಶಿಬಿರವು ಸಂಘದ ಮುಖಾಂತರ ಅಧಿಕೃತವಾಗಿ ಪ್ರತೀ ರವಿವಾರ ನಡೆಯಲಿದೆ. ಇದರ ಪ್ರಯೋಜನವನ್ನು ತುಳು-ಕನ್ನಡಿಗರು ಪಡೆದುಕೊಳ್ಳಬಹುದು.
ಉಚಿತವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಎಳೆಯ ಮಕ್ಕಳಲ್ಲಿ ಕಲೆ, ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಉದ್ಧೇಶದಿಂದ ಈ ಕಾರ್ಯಕ್ರಮಕ್ಕೆ ಮುಂದಾಗಲಾಗಿದೆ. ಸಂಘವು ಶೈಕ್ಷಣಿಕ ಕ್ಷೇತ್ರ ಸೇರಿದಂತೆ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸಂಘದ ಕಾರ್ಯಕ್ರಮಗಳಿಗೆ ಸದಸ್ಯರು ಹಾಗೂ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.
ಸಂಘದ ಉಪಾಧ್ಯಕ್ಷ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಎಂ. ಶೆಟ್ಟಿ, ವಿಕ್ರೋಲಿ ಕನ್ನಡ ಸಂಘವು ಪ್ರಾರಂಭದ ದಿನ ದಿಂದ ಯಕ್ಷಗಾನಕ್ಕೆ ಮೊದಲ ಪ್ರಾಶಸ್ತÂವನ್ನು ನೀಡುತ್ತಿದೆ. ಕಲೆ, ಸಂಸ್ಕೃತಿ, ಸಂಸ್ಕಾರವನ್ನು ಉಳಿ ಸುವ ದೃಷ್ಟಿಯಿಂದ ಸಂಘವು ಸದಾ ಮುಂಚೂಣಿಯಲ್ಲಿದ್ದು, ಉಚಿತ ಯಕ್ಷಗಾನ ಶಿಬಿರದ ಸದುಪ ಯೋಗವನ್ನು ವಿಕ್ರೋಲಿಯ ಸಮಸ್ತ ತುಳು-ಕನ್ನಡಿಗರು ಪಡೆದು ಕೊಳ್ಳಬೇಕು ಎಂದು ಕರೆನೀಡಿದರು.
ಯಕ್ಷಗುರು, ಅಜೆಕಾರು ಕಲಾ ಭಿಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ವಿಕ್ರೋಲಿ ಕನ್ನಡ ಸಂಘದಲ್ಲಿ ಈಗಾಗಲೇ ಹಲವು ವರ್ಷ ಗಳಿಂದ ಯಕ್ಷಗಾನ ತರಬೇತಿ ಯನ್ನು ನೀಡುತ್ತಿದ್ದೇನೆ. ಆದರೆ ಪ್ರಸ್ತುತ ಸಂಘವು ಅಧಿಕೃತವಾಗಿ ಉಚಿತ ಯಕ್ಷಗಾನ ತರಬೇತಿ ಶಿಬಿರ ಆಯೋಜಿಸಿರುವುದು ಸಂತೋಷದ ಸಂಗತಿಯಾಗಿದೆ. ತುಳು-ಕನ್ನಡಿಗರ ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ನಾವೆಲ್ಲರು ಸಂಘದ ಮುಖಾಂತರ ಯಕ್ಷಗಾನ ಕಲೆಯನ್ನು ಉಳಿಸಿ- ಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ನುಡಿದರು.
ವಿಕ್ರೋಲಿ ಕನ್ನಡ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎಲ್. ಶೆಟ್ಟಿ ಪೇಜಾವರ, ಪದಾಧಿಕಾರಿಗಳಾದ ಜತೆ ಕೋಶಾಧಿಕಾರಿಗಳಾದ ಉಮೇಶ್ ಕೋಟ್ಯಾನ್ ಮತ್ತು ಪ್ರವೀಣ್ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ, ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ ಗಣೇಶ್ ಎಂ. ಶೆಟ್ಟಿ, ಸಂಘದ ಸದಸ್ಯ ಹಾಗೂ ವಿಕ್ರೋಲಿ ಬಂಟ್ಸ್‌ನ ಗೌರವ ಕೋಶಾಧಿಕಾರಿ ಯುಗಾನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ವಿಕ್ರೋಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಾಘವ ಕುಂದರ್, ರಘುನಾಥ ಆಳ್ವ, ಪುಷ್ಪಾ ನಾಯಕ್, ಜತೆ ಕಾರ್ಯದರ್ಶಿ ಸತೀಶ್ ಐಲ್ ಮೊದಲಾವರು ಉಪಸ್ಥಿತರಿದ್ದರು.
ಉಚಿತ ಯಕ್ಷಗಾನ ತರಬೇತಿಯನ್ನು ಪಡೆಯಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮ್‌ಸುಂದರ್ ಶೆಟ್ಟಿ (9821337125), ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎಲ್. ಶೆಟ್ಟಿ ಪೇಜಾವರ (9324278028), ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ (9167323280) ಇವರನ್ನು ಸಂಪರ್ಕಿಸಬಹುದು. ಅಲ್ಲದೆ ಸಂಘದ ಕಚೇರಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಉಚಿತ ಯಕ್ಷಗಾನ ತರಬೇತಿ ಶಿಬಿರವು ಪ್ರತೀ ರವಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಂಘದ ಸಂಚಾಲಕತ್ವದ ವೀಕೇಸ್ ಇಂಗ್ಲಿಷ್ ಮಾಧ್ಯಮ ಶಾಲಾ ಸಭಾಗೃಹದಲ್ಲಿ ನಡೆಯಲಿದೆ.