Advertisement
ಹಿರಿಯ ಅಧಿಕಾರಿಗಳ ಮೂಲಕ ಕೆಳಸ್ತರದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಂಪೆನಿಯ ಆಕರ್ಷಕ ಯೋಜನೆಗಳನ್ನು ವಿವರಿಸಿ, ಸಾವಿರದಿಂದ ಲಕ್ಷಾಂತರ ರೂಗಳ ತನಕ ಹೂಡಿಕೆ ಆರೋಪಿಗಳು ಹೂಡಿಕೆ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಷೇರುಗಳ ಖರೀದಿಗೂ ಅವರನ್ನು ಪ್ರೇರೇಪಿಸಿದ್ದಾರೆ.
ರಾಘವೇಂದ್ರ ಶ್ರೀನಾಥ್ ತನ್ನ ವಾಕ್ಚಾರ್ತುಯದಿಂದ ಎಲ್ಲರನ್ನು ಸೆಳೆಯುತ್ತಿದ್ದ. ಜತೆಗೆ ಉತ್ತಮ ಇಂಗ್ಲಿಷ್‌ನಲ್ಲಿ ಮಾತನಾಡಿಯೂ ಆಕರ್ಷಿ ಸುತ್ತಿದ್ದ. ಮೊದಲಿಗೆ ಎಸ್ಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳಿಗೆ ಕಂಪನಿಯ ಯೋಜನೆ ಬಗ್ಗೆ ಮನವರಿಕೆ ಮಾಡಿ, ನಂಬಿಕೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸುತ್ತಿದ್ದ. ಇದಕ್ಕೆ ಪ್ರತಿಫಲವಾಗಿ ಮಾಸಿಕವಾಗಿ ನಿಗದಿತ ಹಣ ಸಹ ಹಿಂದಿರುಗಿಸುತ್ತಿದ್ದ. ಬಳಿಕ ಈ ಹಿರಿಯ ಅಧಿಕಾರಿಗಳ ಮೂಲಕವೇ ಕೆಳ ಸ್ತರದ ಸಿಬ್ಬಂದಿ(ಪಿಎಸ್‌ಐ, ಎಎಸ್‌ಐ, ಪೇದೆ ಹಾಗೂ ಇತರರು)ಗೆ ಹೂಡಿಕೆ ಮಾಡಿಸುವಂತೆ ಹೇಳಿಸುತ್ತಿದ್ದ.
Related Articles
Advertisement
ಒಂದೆಡೆ ಆಜೀವ ಪರ್ಯಂತ ಮಾಸಿಕ ಹಣ ಹಾಗೂ ಹಿರಿಯ ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಹತ್ತಾರು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹೂಡಿಕೆ ಮಾಡಿದ್ದಾರೆ. ಆದರೆ, ಆರಂಭದಲ್ಲಿ ಎಲ್ಲರಿಗೂ ಮಾಸಿಕ ಹಾಗೂ ತ್ತೈಮಾಸಿಕ ರೀತಿಯಲ್ಲಿ ಖಾತೆಗೆ ಹಣ ಜಮಾ ಮಾಡುತ್ತಿದ್ದ. ಅನಂತರ ಹಣವೇ ನೀಡಿಲ್ಲ.
ಷೇರುಗಳ ಪಟ್ಟಿ ನೀಡುತ್ತಿದ್ದ: ಪೊಲೀಸ್ ಅಧಿಕಾರಿಗಳ ಜತೆ ವ್ಯವಹರಿಸುವಾಗ ಷೇರುಗಳ ಪಟ್ಟಿ ನೀಡುತ್ತಿದ್ದ. ಆಯಿಲ್ ಕಂಪನಿ, ಚಿನ್ನಾಭರಣ, ತಾಮ್ರ, ಕಬ್ಬಿಣ, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಷೇರು ಖರೀದಿಸಿದರೆ ಶೇಕಡ ಪ್ರಮಾಣದಲ್ಲಿ ಲಾಭವಿದೆ ಎಂದು ಆಮಿಷವೊಡುತ್ತಿದ್ದ. ಅದಕ್ಕೆ ತಕ್ಕಂತೆ ಸಂದೇಶಗಳನ್ನು ಸಿದ್ದಪಡಿಸಿ ತೋರಿಸುತ್ತಿದ್ದ. ತಮ್ಮ ಕೆಲಸದೊತ್ತಡದಲ್ಲಿ ನಕಲಿ ಸಂದೇಶಗಳನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗದ ಅಧಿಕಾರಿಗಳು ಹಣ ಹೂಡಿದ್ದಾರೆ ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
40-60 ಮಂದಿ ಹೂಡಿಕೆಆರೋಪಿಗಳು 2009ರಿಂದ 2016ರವರೆಗೆ ಎಸ್ಪಿ ದರ್ಜೆಯಿಂದ ಪೇದೆಯವರೆಗೆ ಸುಮಾರು 40-60 ಮಂದಿ ಪೊಲೀಸರು ವಿಕ್ರಂ ಇನ್‌ವೆಸ್ಟ್‌ಮೆಂಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕೆಲವರು ಕಂಪನಿಯ ವಹಿವಾಟಿನ ಮೇಲೆ ಅನುಮಾನಗೊಂಡು ಒಂದೆರಡು ವರ್ಷಗಳಲ್ಲೇ ಹಣ ವಾಪಸ್ ಪಡೆದುಕೊಂಡಿದ್ದಾರೆ. ಇನ್ನು ಕೆಲ ಮಂದಿ ಹಣ ಹಿಂಪಡೆಯದೇ ಅಸಲು ಹಣಕ್ಕಾಗಿ ಪರಿತಪಿಸುತ್ತಿದ್ದಾರೆ. ದಾಖಲೆ ವಶ
ರಾಘವೇಂದ್ರ ಶ್ರೀನಾಥ್ ಆರಂಭಿಸಿರುವ ಬೆಂಗಳೂರಿನ ವಿಕ್ರಂ ಇನ್‌ವೆಸ್ಟ್ ಮೆಂಟ್ ಕಂಪನಿ, ವಿಕ್ರಂ ಗ್ಲೋಬಲ್ ಕಮಾಡಿಟಿಸ್ ಪ್ರೈ ಲಿ ಕಂಪೆನಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಇದೀಗ ಚೆನ್ನೈನಲ್ಲಿರುವ ವಿಕ್ರಂ ಕಮಾಡಿಟಿಸ್, ವಿಕ್ರಂ ಲಾಜಿಸ್ಟಿಕ್ ಸಂಸ್ಥೆಗಳಿಗೆ ಶ್ರೀನಾಥ್‌ನನ್ನು ಕರೆದೊಯ್ದು ಹೂಡಿಕೆ ಹಾಗೂ ಹಣ ಸಂಗ್ರಹದ ಕುರಿತ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಹೂಡಿಕೆದಾರರಿಗೆ ನೀಡುತ್ತಿದ್ದ ಬಾಂಡ್ ಹಾಗೂ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬನಶಂಕರಿ ಮತ್ತು ಮಲ್ಲೇಶ್ವರಂನಲ್ಲಿ ಮನೆಗಳಿಗೆ ಶುಕ್ರವಾರ ಕರೆದೊಯ್ದು ಅಲ್ಲಿಯೂ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಶ್ರೀನಾಥ್ ಪತ್ನಿಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. ನ್ಯಾಯಾಂಗ ಬಂಧನಕ್ಕೆ
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿಮಾ ಏಜೆಂಟ್‌ಗಳಾದ ಸೂತ್ರಂ ಸುರೇಶ್, ಪ್ರಹ್ಲಾದ್, ನಾಗರಾಜ್ ಹಾಗೂ ನರಸಿಂಹಮೂರ್ತಿಯ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಶುಕ್ರವಾರ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮಾ.17ರಂದು(ಶನಿವಾರ) ಪ್ರಮುಖ ಆರೋಪಿ ಶ್ರೀನಾಥ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಶನಿವಾರ ಕೋರ್ಟ್‌ಗೆ ಹಾಜರು ಪಡಿಸಿ ಇನ್ನಷ್ಟು ದಿನ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಆರೋಪಿಯ ಜಾಲ ಕೆದಕಿದಂತೆ ಹೆಚ್ಚಾಗುತ್ತಿದೆ. ಈ ಸಂಬಂಧ ವಶಕ್ಕೆ ಪಡೆಯಬೇಕಿದೆ. ಒಂದು ವೇಳೆ ಪ್ರಕರಣ ಸಿಐಡಿಗೆ ವರ್ಗಾವಣೆಯಾದರೆ ಆರೋಪಿಯನ್ನು ಅಪರಾಧ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.