ಪುಣೆ: ಹಿರಿಯ ನಟ ವಿಕ್ರಮ್ ಗೋಖಲೆ ಅವರ ಆರೋಗ್ಯ ಸ್ಥಿತಿಯು ನಿಧಾನವಾಗಿ ಸುಧಾರಿಸುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ನಗರದ ಆಸ್ಪತ್ರೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
77 ರ ಹರೆಯದ ಗೋಖಲೆ ಅವರು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಲ್ಲಿನ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಖಲೆ ಅವರು ತಮ್ಮ ಆರೋಗ್ಯದಲ್ಲಿ ನಿಧಾನವಾಗಿ ಆದರೆ ಸ್ಥಿರವಾದ ಸುಧಾರಣೆಯನ್ನು ತೋರಿಸುತ್ತಿದ್ದಾರೆ. ಅವರು ಕಣ್ಣು ತೆರೆಯುತ್ತಿದ್ದು, ಕೈಕಾಲುಗಳು ಚಲನೆಯಲ್ಲಿವೆ. ಮುಂದಿನ 48 ಗಂಟೆಗಳಲ್ಲಿ ವೆಂಟಿಲೇಟರ್ ಬೆಂಬಲದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ವಕ್ತಾರ ಶಿರೀಶ್ ಯಡ್ಕಿಕರ್ ಹೇಳಿದ್ದಾರೆ.
ಅವರ ಅಧಿಕ ರಕ್ತದೊತ್ತಡ ಮತ್ತು ಹೃದಯ ಬಡಿತಗಳು ಸ್ಥಿರವಾಗಿವೆ ಎಂದು ಅವರು ಹೇಳಿದರು. ಗೋಖಲೆ ಅವರು ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಬಹಳಷ್ಟು ಹೆಸರು ಮಾಡಿದ್ದು, ಅಮಿತಾಭ್ ಬಚ್ಚನ್ ಅಭಿನಯದ ಅಗ್ನಿಪಥ್ (1990), ಭೂಲ್ ಭುಲೈಯಾ ಸೇರಿದಂತೆ ಹಲವಾರು ಮರಾಠಿ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಟಸಾಮ್ರಾಟ್ (2015) ಮತ್ತು ಮಿಷನ್ ಮಂಗಲ್ ಅವರಿಗೆ ಬಹಳಷ್ಟು ಹೆಸರು ತಂದು ಕೊಟ್ಟ ಚಿತ್ರಗಳಾಗಿವೆ. ಅವರ ಇತ್ತೀಚಿನ ಗೋದಾವರಿ ಮರಾಠಿ ಚಿತ್ರ ಬಿಡುಗಡೆಗೊಂಡು ಹೆಸರು ಮಾಡಿತ್ತು.
ಗುರುವಾರ ಬೆಳಗ್ಗೆ ಅವರ ಕುಟುಂಬಸ್ಥರು ಮತ್ತು ಆಸ್ಪತ್ರೆಯ ವೈದ್ಯರು ಚಿಕಿತ್ಸೆಗೆ ಸ್ಪಂದಿಸದೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದರು.