ವಿಜಯರಾಘವೇಂದ್ರ ಅವರೀಗ ಒಂದೇ ಒಂದು ಗೆಲುವನ್ನು ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಚಿತ್ರಗಳ್ಯಾವೂ ಅಷ್ಟೊಂದು ಸುದ್ದಿಯಾಗಲಿಲ್ಲ. ಅಷ್ಟೇ ಯಾಕೆ, ಪ್ರೇಕ್ಷಕರನ್ನು ಸೆಳೆಯುವಲ್ಲಿಯೂ ಸಫಲವಾಗಲಿಲ್ಲ. ಈ ವರ್ಷ ಅವರು ನಿರ್ದೇಶಿಸಿದ “ಕಿಸ್ಮತ್’ ಚಿತ್ರವೂ ಸಹ ಹೇಳಿಕೊಳ್ಳುವಂತಹ “ಅದೃಷ್ಟ’ ತಂದುಕೊಡಲಿಲ್ಲ. ಈಗ ಗೆಲುವಿನ ನಂಬಿಕೆಯಲ್ಲೇ ”ಪರದೇಸಿ ಕೇರಾಫ್ ಲಂಡನ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಮೇಲೆ ಅವರಿಗೆ ಇನ್ನಿಲ್ಲದ ಭರವಸೆಯೂ ಇದೆ.
ಡಿ.28 ರಂದು ಈ ಚಿತ್ರ ತೆರೆಕಾಣುತ್ತಿದೆ. ನಿರ್ದೇಶಕ ರಾಜಶೇಖರ್ ಜೊತೆಗೆ ವಿಜಯರಾಘವೇಂದ್ರ ಅವರಿಗೆ ಇದು ಎರಡನೇ ಚಿತ್ರ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ “ರಾಜ ಲವ್ಸ್ ರಾಧೆ’ ಚಿತ್ರ ತೆರೆಕಂಡಿತ್ತು. ಈಗ “ಪರದೇಸಿ ಕೇರಾಫ್ ಲಂಡನ್’ ಗೆಲುವು ಕೊಡುತ್ತೆ ಎಂಬ ನಂಬಿಕೆಯಲ್ಲಿದ್ದಾರೆ ವಿಜಯರಾಘವೇಂದ್ರ. ಈ ಚಿತ್ರದ ಪೋಸ್ಟರ್ ನೋಡಿದರೆ, ವಿಜಯರಾಘವೇಂದ್ರ ಪೊಲೀಸ್ ಅಧಿಕಾರಿ ಗೆಟಪ್‌ನಲ್ಲಿ ಕಾಣುತ್ತಾರೆ. ಹಾಗಾದರೆ ಅವರು ದಕ್ಷ ಪೊಲೀಸ್ ಅಧಿಕಾರಿನಾ ಅಥವಾ ಅವರು ನಿಜಕ್ಕೂ ಇಲ್ಲಿ ಪೊಲೀಸ್ ಅಧಿಕಾರಿಯಾಗಿರುತ್ತಾರಾ?
ಇದು ಕಾಡುವ ಪ್ರಶ್ನೆ. ಅದಕ್ಕೆ ಸಿನಿಮಾ ಉತ್ತರ ಕೊಡಲಿದೆ. ಅಂದಹಾಗೆ, ಈ “ಪರದೇಸಿ’ ಹುಡುಗನ ಕಥೆ ಏನು? ಇದೊಂದು ಫ್ಯಾಮಿಲಿ ಡ್ರಾಮಾ. ಜೊತೆಗೆ ಮಾಸ್ ಅಂಶಗಳೂ ಇವೆ. ಚಿತ್ರದಲ್ಲಿ ವಿಜಯರಾಘವೇಂದ್ರ ಕಾಮಿಡಿ ಮೂಲಕ ನಗಿಸುವುದರ ಜೊತೆಗೆ ಅಳಿಸುವ ಪ್ರಯತ್ನವನ್ನೂ ಮಾಡಿದ್ದಾರಂತೆ. ಚಿತ್ರದಲ್ಲಿ ಸಾಕಷ್ಟು ಕಲಾವಿದರು ತುಂಬಿದ್ದು, ಕುಟುಂಬ ವರ್ಗಕ್ಕೆ ಇಷ್ಟ ಆಗುವ ಅಂಶಗಳು ಹೆಚ್ಚಿವೆ ಎಂಬುದು ಚಿತ್ರತಂಡದ ಮಾತು.
ಇಲ್ಲಿ ತಬಲಾನಾಣಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ ಇತರರು ಇದ್ದಾರೆ. ಹಾಗಾಗಿ ಹಾಸ್ಯಕ್ಕೆ ಕೊರತೆ ಇಲ್ಲ. ಈಗಾಗಲೇ ವೀರ್‌ಸಮರ್ಥ್ ಸಂಗೀತದ ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೂ ಒಳ್ಳೆಯ ಮೆಚ್ಚುಗೆ ಸಿಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು. ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಬದರಿನಾರಾಯಣ ನಿರ್ಮಾನ ಮಾಡಿದ್ದಾರೆ. ಚಿತ್ರದ ಮೇಲೆ ನಿರ್ಮಾಪಕರಿಗೆ ಸಾಕಷ್ಟು ನಂಬಿಕೆ ಇರುವುದರಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಿ, ಈ ವಾರ ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ವಿಜಯರಾಘವೇಂದ್ರ ಅವರಿಗೆ ರಾಶಿ ನಾಯಕಿಯಾಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ ಭಟ್, ಶಿವು ಬೆರಗಿ ಗೀತೆ ಬರೆದಿದ್ದಾರೆ. ಶಶಾಂಕ್ ಶೇಷಗಿರಿ, ವಿಜಯಪ್ರಕಾಶ್, ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್, ಅನುರಾಧ ಭಟ್, ಹೇಮಂತ್, ಹೊಸ ಪ್ರತಿಭೆ ಗಂಗಮ್ಮ ಹಾಡಿದ್ದಾರೆ. ಚಿದಾನಂದ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಸಿರಗುಪ್ಪ ಸೇರಿದಂತೆ ಇತರೆ ಕಡೆ ಚಿತ್ರೀಕರಿಸಲಾಗಿದೆ.