Advertisement

ವರುಣಾದಲ್ಲಿ ವಿಜಯೇಂದ್ರ ಗೃಹ ಪ್ರವೇಶ

12:52 PM Apr 14, 2018 | Team Udayavani |

ಮೈಸೂರು: ವಲಸಿಗ ಎಂಬ ಹಣೆಪಟ್ಟಿ ಕಳಚಲು ಕ್ಷೇತ್ರದಲ್ಲೇ ಮನೆ ಮಾಡಿರುವ ವರುಣಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, ಶುಕ್ರವಾರ ಹೋಮ-ಹವನಗಳೊಂದಿಗೆ ಶಾಸ್ತ್ರೋಕ್ತವಾಗಿ ಹೊಸ ಮನೆಗೆ ಪ್ರವೇಶ ಮಾಡಿದರು.

Advertisement

ಪತ್ನಿಯೊಂದಿಗೆ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇದು ನನ್ನ ಮನೆಯಲ್ಲ, ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಅವರ ಮನೆ. ಚುನಾವಣೆವರೆಗೂ ಈ ಮನೆಯಲ್ಲೇ ಇರುತ್ತೇನೆ. ಚುನಾವಣೆ ಮುಗಿದ ಮೇಲೂ ಇಲ್ಲಿನ ಜನರ ಜೊತೆಗೇ ಇರುತ್ತೇನೆ. ಜನರ ಸೇವೆಗೆ ಈ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದು ಹೇಳಿದರು.

ದೈವಕೃಪೆ ಬೇಕು ಎಂಬ ಕಾರಣಕ್ಕೆ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದ್ದೇವೆ. ವಲಸಿಗ ಅನ್ನುವ ಆರೋಪ ಹೋಗಲಾಡಿಸಲು ಅಥವಾ ಇತರರ ತೃಪ್ತಿಗಾಗಿ ನಾನು ಇಲ್ಲಿ ಮನೆ ಮಾಡಿಲ್ಲ. ಮುಂದೆ ವರುಣಾ ಕ್ಷೇತ್ರ ಕಚೇರಿಯೂ ಇದೇ ಆಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಇಲ್ಲಿನ ವಾತಾವರಣ ನೋಡಿಯೇ ಬಾದಾಮಿಗೆ ವಲಸೆ ಹೋಗುತ್ತಿದ್ದಾರೆ. ತನ್ನನ್ನು ಗೆಲ್ಲಿಸುವುದು- ಸೋಲಿಸುವುದು ಕ್ಷೇತ್ರದ ಜನತೆಗೆ ಬಿಟ್ಟಿದ್ದು, ಆದರೆ, ಕ್ಷೇತ್ರ ಪ್ರವಾಸದ ವೇಳೆ ತಮ್ಮ ಕಾರ್ಯಕರ್ತರ ಉತ್ಸಾಹ ನಿರೀಕ್ಷೆಗೂ ಮೀರಿ ಸಿಕ್ಕಿದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಪ್ರವಾಸ ಮಾಡುವಾಗ ನಿರೀಕ್ಷೆಗೂ ಮೀರಿ ತಮಗೆ ಜನಬೆಂಬಲ ಸಿಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಕ್ಷೇತ್ರದ ಜನರ ಕಡೆಗೆ ಗಮನ ನೀಡಿಲ್ಲ. ರೈತರ ಅಚ್ಚುಕಟ್ಟಿಗೆ ನೀರು ಕೊಡದೆ ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದಾರೆ.

Advertisement

ತಮ್ಮ ಹಿಂಬಾಲಕರಾದ ಕೆಲವೇ ಕೆಲವು ಮಂದಿಗೆ ಸಹಾಯ ಮಾಡಿರುವ ಸಿದ್ದರಾಮಯ್ಯ ಅವರು, ಜನ ಸಾಮಾನ್ಯರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಮುಖ್ಯಮಂತ್ರಿಯವರು ಮನಸ್ಸು ಮಾಡಿದ್ದರೆ ವರುಣಾ ಕ್ಷೇತ್ರವನ್ನು ನಂಬರ್‌ ಒನ್‌ ಮಾಡಬಹುದಿತ್ತು. ಆದರೆ, ಅವರು ಆ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದರು.

ಮರಳು ದಂಧೆ ಎಗ್ಗಿಲ್ಲದೆ ನಡೆದಿದೆ. ಮುಖ್ಯಮಂತ್ರಿಯವರ ಬೆಂಬಲಿಗರೇ ಈ ದಂಧೆಯಲ್ಲಿ ತೊಡಗಿದ್ದು, ಅವರ ವಿರುದ್ಧ ಮಾತನಾಡಿದವರ ವಿರುದ್ಧ ಕೇಸ್‌ ಹಾಕಿಸಿ ತೊಂದರೆ ಕೊಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ದಂಧೆಯನ್ನು ಮಟ್ಟಹಾಕಲು ಕ್ಷೇತ್ರದ ಜನತೆ ತೀರ್ಮಾನಿಸಿದ್ದಾರೆ ಎಂದು ವಿವರಿಸಿದರು.

ಒಕ್ಕಲಿಗ ಮುಖಂಡರಿಗೆ ಗಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರಗೆ ಪ್ರಬಲ ಪೈಪೋಟಿ ನೀಡಲು ತಂತ್ರಗಾರಿಕೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ವರುಣಾ ಕ್ಷೇತ್ರದ ಹಲವು ಒಕ್ಕಲಿಗ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವರುಣಾ ಜಿಪಂ ಕ್ಷೇತ್ರದ ಮಾಜಿ ಸದಸ್ಯ ಸಿದ್ದೇಗೌಡ, ಮಾಜಿ ಮಂಡಲ ಪ್ರಧಾನರಾದ ಜೆಡಿಎಸ್‌ ಮುಖಂಡ ನಾಗೇಶ್‌ಗೌಡ ಸೇರಿ ಹಲವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ.

ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಜಿಪಂ ಮಾಜಿ ಸದಸ್ಯ ಸಿದ್ದೇಗೌಡ, 40 ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾ ಬಂದಿದ್ದೇವೆ, ಆದರೂ ಸಿದ್ದರಾಮಯ್ಯ ತಮ್ಮನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿಯಾದ ನಂತರ ಅವರಿಗೆ ತಾವೆಲ್ಲಾ ಬೇಡವಾಗಿದ್ದೇವೆ. ಸ್ವಜಾತಿಯವರಿಗೆ ಮಾತ್ರ ಆದ್ಯತೆ ನೀಡುತ್ತಾ ಬಂದಿದ್ದಾರೆ. ಇದರಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next