Advertisement

ವರುಣ ಅಡಕತ್ತರಿಯಲ್ಲಿ ವಿಜಯೇಂದ್ರ: ಸಿದ್ದು ಕ್ಷೇತ್ರದಲ್ಲಿ ಕಣಕ್ಕಿಳಿಸಲು ವರಿಷ್ಠರ ಆಸಕ್ತಿ

12:52 AM Mar 31, 2023 | Team Udayavani |

ಮೈಸೂರು: ಆಗ ಅವರು ವರುಣ ಕ್ಷೇತ್ರದಲ್ಲಿ ಎದುರಾಳಿಗಳಿಗೆ ತೊಡೆ ತಟ್ಟಲು ಸಿದ್ಧರಿದ್ದರು. ಆದರೆ  ಅವರ ಪಕ್ಷದ ವರಿಷ್ಠರು ತಯಾರಿರಲಿಲ್ಲ.  ಈಗ ಅವರಿಗೆ ಆಸಕ್ತಿ ಇಲ್ಲ. ಆದರೆ ತೊಡೆ ತಟ್ಟುವಂತೆ ವರಿಷ್ಠರು ಅವರನ್ನು ಅಖಾಡಕ್ಕೆ ತಳ್ಳುತ್ತಿದ್ದಾರೆ.

Advertisement

ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಚಾರದಲ್ಲಿ ಅನ್ವಯವಾಗುವ ಮಾತಿದು.

ವಿಜಯೇಂದ್ರ 2018ರ ಅಸೆಂಬ್ಲಿ ಚುನಾವಣೆ ವೇಳೆ ವರುಣ ಕ್ಷೇತ್ರ ಸುತ್ತಿ ಪಕ್ಷ ಸಂಘಟಿಸಿದ್ದರು. ತಮ್ಮ ಬೆಂಬಲಿಗರ ಪಡೆ ಕಟ್ಟಿದ್ದರು. ವೀರಶೈವ-ಲಿಂಗಾಯತ ಸಮಾಜದವರು ಹೆಚ್ಚಿರುವ ಈ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಮೂಡಿಸಿದರು. ಆಗ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ವಿಜಯೇಂದ್ರ ಅಖಾಡಕ್ಕೆ ಇಳಿಯಲು ಮುಂದಾದಾಗ ಈ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿತ್ತು. ಅದೊಂದು ಅನಿರೀಕ್ಷಿತ ತಿರುವಾಗಿತ್ತು.

ಆಗ ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಅವರ ಮಿಂಚಿನ ಸಂಚಾರ, ಜನರ ಜತೆ ಒಡನಾಟ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ಕಂಡು ಸ್ಥಳೀಯ ಕಾಂಗ್ರೆಸಿಗರು ದಿಗಿಲುಗೊಂಡಿದ್ದು ಉಂಟು. ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ಹೈಕಮಾಂಡ್‌ ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್‌ ನಿರಾಕರಿಸಿತು. ಇದರಿಂದ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದು ಈಗ ಇತಿಹಾಸ.

ಈಗ ಕಳೆದ ಐದು ವರ್ಷಗಳಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿಯೂ ಬದಲಾಗಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವರುಣ ಕ್ಷೇತ್ರದಲ್ಲಿ ಮತ್ತೆ ವಿಜಯೇಂದ್ರ ಅವರ ಹೆಸರು ಮುಂಚೂಣಿಗೆ ಬಂದು ನಿಂತಿದೆ. ಆಗ ವರುಣ ಕ್ಷೇತ್ರದಲ್ಲಿ ಕಣಕ್ಕಿಳಿಯದ ಸಿದ್ದರಾಮಯ್ಯ ಅವರಿಗೆ ಈ ಬಾರಿ ವರುಣದಲ್ಲಿಯೇ ಸ್ಪರ್ಧಿಸುವಂತೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಆಗ ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ಅವರ ಮಧ್ಯೆ ಕಾಳಗದ ನಿರೀಕ್ಷೆ ಹುಸಿಯಾಗಿತ್ತು. ಇಬ್ಬರೂ ಅಖಾಡದಿಂದ ದೂರ ಸರಿದರು. ಈಗ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾಗಿದ್ದರೆ, ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್‌ ತಳೆಯುವ ನಿಲುವು ಕುತೂಹಲಕಾರಿಯಾಗಿದೆ.

Advertisement

ವರುಣದಲ್ಲಿ ಈ ಬಾರಿ ಸ್ಪರ್ಧಿಸಲು ವಿಜಯೇಂದ್ರ ಅವರಿಗೆ ಆಸಕ್ತಿ ಇಲ್ಲ. ಕಳೆದ ಚುನಾವಣೆಯಲ್ಲಿ ಇಲ್ಲಿ ಟಿಕೆಟ್‌ ನಿರಾಕರಿಸಿದ ಅನಂತರ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಸಕ್ತಿ ಕಳೆದುಕೊಂಡರು. ವರುಣ ಕ್ಷೇತ್ರಕ್ಕೆ ಭೇಟಿ ಕಡಿಮೆಯಾಯಿತು. ಯಡಿಯೂರಪ್ಪ ಅವರು ಚುನಾವಣ ರಾಜಕಾರಣದಿಂದ ದೂರ ಸರಿದ ಅನಂತರ ಅವರು ಪ್ರತಿನಿಧಿಸಿರುವ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕೆ ಧಮುಕಲು ವಿಜಯೇಂದ್ರ ತಯಾರಿ ನಡೆಸಿದ್ದಾರೆ. ಹೀಗಿರುವಾಗ, ವರುಣ ಕ್ಷೇತ್ರದಿಂದ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್‌ ಚಿಂತಿಸಿರುವುದು ವಿಜಯೇಂದ್ರ ಅವರ ಆಪ್ತರಲ್ಲಿ ಬೇಸರ ಮೂಡಿಸಿದೆ.

ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿಯಲ್ಲ, ವಿಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಆಗ ಮುಖ್ಯಮಂತ್ರಿಯಾಗಿದ್ದರಿಂದ ಅವರ ವಿರುದ್ಧ ಕಣಕ್ಕಿಳಿಯುವ ಆಸಕ್ತಿಯನ್ನು ವಿಜಯೇಂದ್ರ ತೋರಿದ್ದರು. ಆಗ ಬಿಜೆಪಿ ವಿಪಕ್ಷದಲ್ಲಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ. ಸಿªದರಾಮಯ್ಯ ವಿರುದ್ಧ ಸ್ಪರ್ಧಿಸಬೇಕೆಂದು ಸ್ವಕ್ಷೇತ್ರ ಶಿಕಾರಿಪುರ ಬಿಟ್ಟು  ವರುಣಾಗೆ ಏಕೆ ಬರಬೇಕು? ಮಾಸ್‌ ಲೀಡರ್‌ ಆಗಿರುವ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ವಿಜಯೇಂದ್ರ ಅವರೇ ಏಕೆ ಗುರಾಣಿ ಆಗಬೇಕು? ಪಕ್ಷದಲ್ಲಿ ಅನೇಕ ಹಿರಿಯ ನಾಯಕರು, ಸಚಿವರು ತಮ್ಮ ಸುರಕ್ಷಿತ ಕ್ಷೇತ್ರ ಬಿಟ್ಟು ಬರದಿದ್ದಾಗ ವಿಜಯೇಂದ್ರ ಅವರ ವಿಚಾರದಲ್ಲಿಯೇ ಏಕೆ ಹೈಕಮಾಂಡ್‌ ಈ ಧೋರಣೆ ತಳೆದಿದೆ? ಸಿದ್ದರಾಮಯ್ಯ ವಿರುದ್ಧ ನಿಂತು ವಿಜಯೇಂದ್ರ ಅವರೇಕೆ ಬಲಿಪಶುವಾಗಬೇಕು? ಎಂಬ ಪ್ರಶ್ನೆಗಳು ವಿಜಯೇಂದ್ರ ಅವರ ಬೆಂಬಲಿಗರನ್ನು ಕಾಡಿದೆ.

ವಿಜಯೇಂದ್ರ ವರುಣದಲ್ಲಿ ಕಣಕ್ಕಿಳಿದರೆ ಶಿಕಾರಿಪುರದಲ್ಲೂ  ಅವರ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್‌ ಅವಕಾಶ ಕಲ್ಪಿಸುತ್ತದೆಯೇ? ಆಗ ಅವಕಾಶ ಕಲ್ಪಿಸಿದರೆ ಬಿಜೆಪಿಯ ಇನ್ನೂ ಕೆಲವು ಹಿರಿಯ ನಾಯಕರು ಇಂಥದ್ದೇ ಅವಕಾಶಕ್ಕೆ ಬೇಡಿಕೆ ಮುಂದಿಡಬಹುದು.

ಒಟ್ಟಿನಲ್ಲಿ ವಿಜಯೇಂದ್ರ ಅವರ ವರುಣ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್‌ ತಳೆಯುವ ನಿಲುವು ಕುತೂಹಲ ಮೂಡಿಸಿದೆ.

ಹೈಕಮಾಂಡ್‌ ನಿರ್ಧಾರ ಅಂತಿಮ

ವರುಣ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಕುರಿತು ಹೈಕಮಾಂಡ್‌ ನಿಲುವಿಗೆ ಬದ್ಧರಾಗಿರುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ. ವರುಣ ಸ್ಪರ್ಧೆ ಕುರಿತು ವಿಜಯೇಂದ್ರ  ವರುಣ ಕ್ಷೇತ್ರದ ತಮ್ಮ ಬೆಂಬಲಿಗರ  ಜತೆ ಮಾತುಕತೆ ನಡೆಸಿದ್ದಾರೆ. ವರುಣದಲ್ಲಿ ಸ್ಪರ್ಧಿಸುವ ಆಸಕ್ತಿ ತಮಗಿಲ್ಲ. ಆದರೆ ಹೈಕಮಾಂಡ್‌ ತಮ್ಮ ಸ್ಪರ್ಧೆ ವಿಚಾರದಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next