Advertisement

ತಪ್ಪಿದ ಪರಿಷತ್ ಟಿಕೆಟ್: ಕಾರ್ಯಕರ್ತರಿಗೆ ಸುದೀರ್ಘ ಪತ್ರ ಬರೆದ ವಿಜಯೇಂದ್ರ

01:03 PM May 24, 2022 | Team Udayavani |

ಬೆಂಗಳೂರು: ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಬಿಜೆಪಿ ಪರಿಷತ್ ಟಿಕೆಟ್ ಕೈತಪ್ಪಿದೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಮಾಡಲಾಗಿದ್ದರೂ, ಬಿಜೆಪಿ ವರಿಷ್ಠರು ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೆ, ಬಿಎಸ್ ವೈ ಪುತ್ರನಿಗೆ ಟಿಕೆಟ್ ನಿರಾಕರಿಸಿದೆ.

Advertisement

ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ರಾಜ್ಯ ರಾಜಕಾರಣದಲ್ಲಿ ಹಲವು ಗುಸುಗುಸುಗಳಿಗೆ ಕಾರಣವಾಗಿದೆ. ವಿಜಯೇಂದ್ರ ಕಾರಣಕ್ಕೆ ಅಭ್ಯರ್ಥಿಗಳ ಲಿಸ್ಟ್ ಅಂತಿಮಗೊಳಿಸಲು ತಡರಾತ್ರಿವರೆಗೆ ಕಸರತ್ತು ನಡೆಸಲಾಗಿತ್ತು. ಆದರೆ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಆರೋಪಕ್ಕೆ ತುತ್ತಾಗುವ ಆತಂಕದಿಂದ   ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆ ಎನ್ನುತ್ತಿವೆ ಮೂಲಗಳು.

ಈ ನಡುವೆ ಬಿ.ವೈ.ವಿಜಯೇಂದ್ರ ಅವರು ಟಿಕೆಟ್ ಗಿಟ್ಟಿಸಿಕೊಂಡ ನಾಲ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಅಲ್ಲದೆ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

ಇದನ್ನೂ ಓದಿ:ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು: ಸಿ.ಎಂ.ಇಬ್ರಾಹಿಂ

ಪಕ್ಷದ ವರಿಷ್ಠರು ನನಗೆ ರಾಜ್ಯ ಉಪಾಧ್ಯಕ್ಷನಾಗುವ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ರಾಜಕೀಯ ಅಧಿಕಾರಗಳು ನಿಂತ ನೀರಲ್ಲ. ಇದನ್ನು ಕಾರ್ಯಕರ್ತರು, ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಟೀಕೆ, ಟಿಪ್ಪಣಿಗಳು, ಉದ್ಘೋಷಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ಅದು ನನ್ನ ಮತ್ತು ತಂದೆಯ ಭಾವನೆಗಳಿಗೆ ಮಸಿ ಬಳಿದಂತಾಗುವುದೇ ಹೊರತು, ನಮ್ಮನ್ನು ಬೆಂಬಲಿಸಿದಂತೆ ಆಗುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕು ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.

Advertisement

ಬಿಜೆಪಿ ಟಿಕೆಟ್ ಫೈನಲ್: ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಲಕ್ಷ್ಮಣ ಸವದಿ, ಹೇಮಲತಾ ನಾಯಕ್, ಕೇಶವ ಪ್ರಸಾದ್ ಮತ್ತು ಚಲವಾದಿ ನಾರಾಯಣ ಸ್ವಾಮಿಗೆ ಟಿಕೆಟ್ ಅಂತಿಮ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಸವರಾಜ ಹೊರಟ್ಟಿಯವರಿಗೆ ಟಿಕೆಟ್ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next