Advertisement

ತಣಿಯದ ಸೋಮಣ್ಣ ಕೋಪ: ದಿಲ್ಲಿಯಲ್ಲೂ ವಿಜಯೇಂದ್ರ ವಿರುದ್ಧ ಆಕ್ರೋಶ

12:24 AM Mar 16, 2023 | Team Udayavani |

ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದಿಂದ ದಿಲ್ಲಿ ಅಂಗಣ ತಲುಪಿದರೂ ವಸತಿ ಸಚಿವ ವಿ. ಸೋಮಣ್ಣ ಅವರ ಆಕ್ರೋಶ ಇನ್ನೂ ಆರಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹಾಗೂ ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರನ್ನು ದಿಲ್ಲಿಯಲ್ಲಿ ಬುಧವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. “ನಾನು ಬಂದ ಕೆಲಸ ಆಗಿದೆ, ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಆಗಿದೆ’ ಎನ್ನುವ ಮೂಲಕ ಪರೋಕ್ಷವಾಗಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

“ವಿಜಯೇಂದ್ರ ಅವರ ವಯಸ್ಸೆಷ್ಟು? ನನ್ನ ವಯಸ್ಸು ಎಷ್ಟು? ನನಗೂ ಅವರಿಗೂ ಏಕೆ ಹೋಲಿಕೆ ಮಾಡುತ್ತೀರಿ? ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಸಿಎಂ ಯಡಿಯೂರಪ್ಪನವರ ಮಗ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನು ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ. ನನ್ನನ್ನು ಏಕೆ ಪ್ರಶ್ನಿಸುತ್ತೀರಿ?’ ಎಂದರು.

ವ್ಯಾಮೋಹ ಇಲ್ಲ
45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ವ್ಯಾಮೋಹ ಇಲ್ಲ. ಮಾಧ್ಯಮದವರು ಅಭಿವೃದ್ಧಿ ಬಗ್ಗೆ ಗಮನ ಕೊಡಿ. ಪ್ರತೀ ದಿನ ಸೋಮಣ್ಣ, ಯಡಿಯೂರಪ್ಪ ಎಂದು ಸಮಯ ಹಾಳು ಮಾಡಬೇಡಿ. ನನ್ನಿಂದ ಬಿಜೆಪಿಗೆ ಅಪಚಾರ ಆಗುವುದಿಲ್ಲ. ಸಿದ್ದಗಂಗಾ ಮಠಕ್ಕೂ ನನಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ. ನನ್ನನ್ನು ಬಿಟ್ಟು ಬಿಡಿ. ಯಾರೂ ಶಾಶ್ವತರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನದು ಯಡಿಯೂರಪ್ಪನವರದ್ದು ತಂದೆ ಮಗನ ಸಂಬಂಧ. ಯಡಿಯೂರಪ್ಪನವರ ಬಗ್ಗೆ ನನಗೆ ಸಿಟ್ಟಿಲ್ಲ. ಅವರು ಕರೆದರೆ ಹೋಗುವೆ. ಇವತ್ತಿನವರೆಗೆ ಅವರು ಕರೆದಿಲ್ಲ. ನಾನು ಸತ್ಯ ಮಾತಾಡುತ್ತೇನೆ. ಒಮ್ಮೊಮ್ಮೆ ಅದು ಕಹಿ ಆಗುತ್ತದೆ, ಏನು ಮಾಡಲಿ ಹೇಳಿ ? ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನನಗೇನೂ ಲಾಭವಿಲ್ಲ. ಅವರ ಬಗ್ಗೆ ವಿನಾಕಾರಣ ಮಾತಾಡೋದು ಅಪ್ರಸ್ತುತ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದರು.

Advertisement

ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿ¨ªೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಅದಾದ ಬಳಿಕ ಸಚಿವ ಪ್ರಹ್ಲಾದ್‌ ಜೋಷಿಯವರನ್ನು ಭೇಟಿಯಾಗಿದ್ದೇನೆ. ಆ ಬಳಿಕ ಧರ್ಮೇಂದ್ರ ಪ್ರಧಾನ್‌ ಅವರನ್ನೂ ಭೇಟಿ ಮಾಡಿದ್ದೇನೆ. ಯಾವುದೇ ವೈಯಕ್ತಿಕ ಕೆಲಸಕ್ಕಾಗಿ ಬಂದಿಲ್ಲ. ಆದರೆ ನಾನು ಇಲ್ಲಿಗೆ ಬಂದ ಕೆಲಸವಾಗಿದೆ ಎಂದರು.

ಅಮಿತ್‌ ಶಾ ಭೇಟಿಯಾದ ಸೋಮಣ್ಣ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ವಸತಿ ಸಚಿವ ವಿ. ಸೋಮಣ್ಣ ಕೊನೆಗೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೊಸದಿಲ್ಲಿಯಿಂದ ಬೆಂಗಳೂರಿಗೆ ಹೊರಡಬೇಕು ಎನ್ನುವಷ್ಟರದಲ್ಲಿ ಶಾ ಅವರಿಂದ ಕರೆ ಬಂದ ಹಿನ್ನೆಲೆಯಲ್ಲಿ ಪ್ರಯಾಣ ರದ್ದುಗೊಳಿಸಿದ್ದಾರೆ. ಅಮಿತ್‌ ಶಾ ಭೇಟಿಯ ವೇಳೆ ವಸತಿ ಸಚಿವರು ತಮ್ಮೆಲ್ಲ ಒಳಬೇಗುದಿಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಜಯನಗರದಲ್ಲಿರುವ ತಮ್ಮ ನಿವಾಸಕ್ಕೆ ನೀವು ಭೇಟಿ ನೀಡಿದ ಬಳಿಕ ನಾನು ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ನನ್ನ ಹಾಗೂ ಪುತ್ರನ ಬೆಳವಣಿಗೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಸೋಮಣ್ಣ ಅಳಲು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next