ಮೈಸೂರು: ಸಮುದಾಯಗಳು ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದು ಜಾತಿಗೆ ಸೀಮಿತ ವಾಗದೆ ಎಲ್ಲ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸು ತ್ತಿದ್ದು, ಈಗಲೂ ಸಮುದಾಯದ ಬೇಡಿಕೆಗಳಿಗೆ ಕಾನೂ ನಿನ ಚೌಕಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ರವಿವಾರ ನಗರದ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಹಾಸಭಾ ಭವನದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಒಗ್ಗೂಡಿಸಿ, ಒಡೆಯಬೇಡಿ :
ನಮ್ಮ ಸಮುದಾಯಕ್ಕೆ ಮಾರ್ಗದರ್ಶನ ಮಾಡಿ ದಿಕ್ಕು ತೋರಿದ್ದು ಸಿದ್ಧಗಂಗಾ ಹಾಗೂ ಸುತ್ತೂರು ಶ್ರೀಗಳು. ಅವರ ಮಾರ್ಗದರ್ಶನದಲ್ಲೇ ಹೋರಾಟಗಳು ನಡೆಯಬೇಕು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೋರಾಟದ ನಾಯಕತ್ವ ವಹಿಸಬೇಕು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ಮೌನ ಮುರಿದ ಸುತ್ತೂರು ಶ್ರೀ :
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹಲವು ಸಮುದಾಯಗಳು ಮೀಸಲಾತಿ ಗಾಗಿ ಹೋರಾಡುತ್ತಿವೆ. ತಮ್ಮ ಸಮುದಾಯದ ಹಕ್ಕಿಗೆ ಹೋರಾಟಗಳು ನಡೆಯುತ್ತಿರುವಾಗ ಸರಕಾರ ಇದೆಲ್ಲ ವನ್ನೂ ಸೂಕ್ಷ್ಮವಾಗಿ ಪರಾಮರ್ಶಿಸಬೇಕು. ಸೌಲಭ್ಯ ವಂಚಿತ ಸಮುದಾಯಗಳಿಗೆ ಸೌಲಭ್ಯ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.