ಸಿಂಧನೂರು : ಮಸ್ಕಿಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ಹೋದಾಗ 30 ಸಾವಿರ ಜನ ಭವ್ಯವಾಗಿ ಸ್ವಾಗತಿಸಿದ್ದು, ಪ್ರತಾಪ್‌ಗೌಡರು 20 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಅವರು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಸ್ಕಿ ಕ್ಷೇತ್ರಕ್ಕೆ ಮತ್ತೂಮ್ಮೆ ಬಂದು ಪ್ರಚಾರ ನಡೆಸುವೆ. ಬಸವ ಕಲ್ಯಾಣದಲ್ಲಿ ಈಗಾಗಲೇ ನಾವು ಗೆದ್ದಾಗಿದೆ. ಬೆಳಗಾವಿಯಲ್ಲೂ ನಾವೇ ಗೆಲ್ಲಲಿದ್ದೇವೆ. ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ದೆಹಲಿಗೆ ಕಳಿಸಲಾಗಿದ್ದು, ಶೀಘ್ರವೇ ಹೆಸರು ಪ್ರಕಟಿಸಲಾಗುವುದು ಎಂದರು.
ಸ್ಪರ್ಧೆಯಿಲ್ಲ, ಮೈಸೂರಲ್ಲಿ ಮನೆ: ಬಸವಕಲ್ಯಾಣದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಪರ್ಧೆ ಮಾಡುತ್ತಾರೆನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೈಸೂರಿನಲ್ಲಿ ಮನೆ ಮಾಡಿ, ವಿಜಯೇಂದ್ರ ಅವರು ಅಲ್ಲಿ ಬಿಡಾರ ಹೂಡಲಿದ್ದಾರೆ. ಅಲ್ಲಿದ್ದುಕೊಂಡು ಐದಾರು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಮಾಡಲಿದ್ದಾರೆ.
ಸುತ್ತಮುತ್ತಲಿನ ಜಿಲ್ಲೆಗಳಿಗೂ ಇದರಿಂದ ಅನುಕೂಲವಾಗಲಿದೆ. ಅವರಿಗೆ ಏನು ಜವಾಬ್ದಾರಿ ನೀಡಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ವರುಣಾ ಕ್ಷೇತ್ರಕ್ಕೆ ಮುಂದಿನ ಬಾರಿ ಯಾರು ಸ್ಪರ್ಧಿಸಲಿದ್ದಾರೆಂಬುದು ಕೂಡ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ನೀರಾವರಿಗೆ ಆದ್ಯತೆ : 5ಎ ಕಾಲುವೆಗೆ ಸಂಬಂಧಿಸಿದ ಬೇಡಿಕೆಯನ್ನು ಗಮನಿಸಿದ್ದು, ಅಲ್ಲಿ ಅನುಕೂಲವಾಗುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಅವಶ್ಯವಿರುವ ಯೋಜನೆಗಳನ್ನು ಮಾಡಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್ 10ರ ತನಕ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ತೆರಿಗೆ ಹೊರೆಯಿಲ್ಲದ ಬಜೆಟ್: ಕೋವಿಡ್ ನಂತಹ ಕ್ಲಿಷ್ಟ ಸಮಯದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ತೆರಿಗೆ ಹೊರೆ ಇಲ್ಲದ ಐತಿಹಾಸಿಕ ಬಜೆಟ್‌ನ್ನು ಮಂಡಿಸಲಾಗಿದೆ. ಅಭಿವೃದ್ಧಿಗೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಬದ್ಧವಿದ್ದು, ಯಾವುದೇ ಹೆಚ್ಚಿನ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕಿಲ್ಲ.
ನಮ್ಮ ಸರಕಾರದ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಪಕ್ಷ 130 ಸ್ಥಾನಗಳಲ್ಲಿ ಗೆಲುವು ಸಾಧಿ ಸಲಿದೆ ಎಂದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಜಿಪಂ ಸದಸ್ಯರಾದ ಎನ್.ಶಿವನಗೌಡ ಗೋರೆಬಾಳ, ಅಮರೇಗೌಡ ವಿರೂಪಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ್ ಇದ್ದರು.