ವಿಜಯಪುರ: ಯಡಿಯೂರಪ್ಪ ಅವರು ಮೇಲ್ಮನೆ ಚುನಾವಣೆಗೆ ತಮ್ಮ ಮಗ ವಿಜಯೇಂದ್ರಗೆ ಟಿಕೆಟ್ ಕೊಡಿಸಲಾಗಲಿಲ್ಲ. ಬಿಜೆಪಿ ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಅರ್ಥವಿಲ್ಲ. ವಿಧಾನಸಭೆ ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಿ ಗೆಲ್ಲುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಕುಟುಂಬದವರಿಗೆ ಟಿಕೇಟ್ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತೀರ್ಮಾನ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವುದೇ. ಆದರೆ ವಿಧಾನಸಭಾ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸಲಿದ್ದು, ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲಲಿದ್ದಾರೆ ಎಂದು ತಮ್ಮ ಮಗನ ರಾಜಕೀಯ ಸಾಮರ್ಥ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನು ಪಕ್ಕಕ್ಕೆ ಸರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಬಿಜೆಪಿ ನನಗೆ ಕೊಟ್ಟಿರುವ ಸ್ಥಾನಮಾನಗಳು ಬೇರೆ ಯಾರಿಗೂ ಸಿಕ್ಕಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ, ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಹೀಗೆ ಎಲ್ಲಾ ಅವಕಾಶ ಸಿಕ್ಕಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ ಕೊಟ್ಟು ಬಂದವನು. ಆದರೂ ರಾಜ್ಯದ ಜನತೆ, ಪಕ್ಷ ನನ್ನ ಮೇಲೆ ಅದೇ, ಪ್ರೀತಿ, ವಿಶ್ವಾಸ, ಗೌರವ ಇರಿಸಿಕೊಂಡಿರುವುದು ನನಗೆ ಸಂತೃಪ್ತಿ ನೀಡಿದೆ ಎಂದರು.
ಇದನ್ನೂ ಓದಿ:ಕರಾವಳಿಯಲ್ಲಿ ಸೇನಾಪೂರ್ವ ತರಬೇತಿ ಕೇಂದ್ರ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಭವಿಷ್ಯದ ದಿನಗಳಲ್ಲಿ ಪಕ್ಷ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲು ಏನೇನು ಪ್ರಯತ್ನ ಮಾಡಬೇಕೋ ಅದನ್ನು ಮಾಡೇ ಮಾಡುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಆದರೆ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬರುತ್ತೇವೆಂದು ಭ್ರಮೆಯಲ್ಲಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕುಟುಕಿದರು.
ಇನ್ನೂ ಹತ್ತು ವರ್ಷ ಸಕ್ರೀಯ ರಾಜಕೀಯದಲ್ಲಿ ಇರುವುದಾಗಿ ಮಂಗಳವಾರ ಮೇಲ್ಮನೆ ಪ್ರಚಾರ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಪುನರುಚ್ಛರಿಸಿದ ಯಡಿಯೂರಪ್ಪ, ಪಕ್ಷದ ಸಂಘಟನೆಗಾಗಿ ರಾಜ್ಯದಲ್ಲಿ ಓಡಾಡಲು ನಿಶ್ಚಯಿಸಿದ್ದೇನೆ. ಹೀಗಾಗಿ ರಾಜ್ಯದ ಜನತೆಯ ಆಶೀರ್ವಾದದಿಂದ ಆರೋಗ್ಯ ಚೆನ್ನಾಗಿದ್ದರೆ ಇನ್ನೂ ಹತ್ತು ವರ್ಷ ಸಕ್ರೀಯ ರಾಜಕೀಯದಲ್ಲಿ ಇದ್ದು ಪಕ್ಷ ಸಂಘಟಿಸುತ್ತೇನೆ ಎಂದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ವಿಧಾನಸಭೆಗೆ ನಡೆಯುವ ಚುನಾವಣೆಗೆ ಸಾಮೂಹಿಕ ನೇತ್ರತ್ವದಲ್ಲಿ ಜನತೆಯ ಮುಂದೆ ಹೋಗುತ್ತೇವೆ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.