ವಿಜಯಪುರ: ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಹೆಚ್ಚಾಗುತ್ತಿದ್ದು, 45 ವರ್ಷ ಮೇಲ್ಪಟ್ಟವರು ತಪ್ಪದೇ ಕೋವಿಡ್ ಲಸಿಕೆ ಪಡೆಯುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ರವಿವಾರ ಶಾಸಕರ ಪ್ರದೇಶಾಭಿವೃದ್ಧಿ ನಿ ಧಿಯಿಂದ ಚಾಲುಕ್ಯ ನಗರದಲ್ಲಿ ಉಚಿತ ಕೋವಿಡ್ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಹಾಗೂ ದೇಶಾದ್ಯಂತ ಕೋವಿಡ್ ಎರಡನೇ ಅಲೆ ಜೋರಾಗಿದೆ. ಕಾರಣ ಎಲ್ಲರೂ ಜಾಗೃತರಾಗಿ ಇರುವ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ನಿಯಮ ಪಾಲನೆಯಲ್ಲಿ ಸಣ್ಣ ನಿರ್ಲಕ್ಷéವೂ ನಿಮ್ಮನ್ನು ಮಾರಕ ರೋಗಕ್ಕೆ ತುತ್ತಾಗುವಂತೆ ಮಾಡುವ ಅಪಾಯವಿದೆ. ಇಂತ ಸಮಸ್ಯೆ ಎದುರಾಗದಂತೆ ಜಾಗೃತರಾಗಿರಬೇಕು. ಜೊತೆಗೆ 45 ವರ್ಷ ಮೇಲ್ಪಟ್ಟವರು ತಕ್ಷಣ ಕೋವಿಡ್ ಲಸಿಕೆ ಪಡೆಯುವಂತೆ ಕಿವಿಮಾತು ಹೇಳಿದರು. ಭಾರತದಲ್ಲೇ ಅಭಿವೃದ್ಧಿ ಪಡಿಸಿದ ಅತ್ಯಂತ ಸುರಕ್ಷಿತ ಹಾಗೂ ಕೊರೊನಾ ಸೋಂಕು ಹತ್ತಿಕ್ಕುವಲ್ಲಿ ಪರಿಣಮಕಾರಿಯಾದ ಕೋವಿಡ್ ಲಸಿಕೆಯನ್ನು ಎಲ್ಲ ಹಿರಿಯ ನಾಗರಿಕರು ಪಡೆಯಬೇಕು. ಜೊತೆಗೆ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಅನ್ವಯ ಅರ್ಹರಿರುವ ಎಲ್ಲರೂ ಲಸಿಕೆ ಪಡೆದು, ಸಮಾಜದಲ್ಲಿ ಇತರರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಇದರೊಂದಿಗೆ ಕೋವಿಡ್ ಮುಕ್ತ ಭಾರತ ನಿರ್ಮಾಣದಲ್ಲಿ ನಮ್ಮ ಹೊಣೆಯನ್ನು ನಿಭಾಯಿಸಲು ಎಲ್ಲ ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಗರದ ಮಠಪತಿ ಗಲ್ಲಿಯ ಆದಿಶಕ್ತಿ ಸಭಾಭವನದಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು. ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಂ.ಗು. ಸಜ್ಜನ, ರಾಜಶೇಖರ ಮಗಿಮಠ, ವೈದ್ಯಾ ಧಿಕಾರಿ ಡಾ| ಅಗರವಾಲ ಇದ್ದರು.