ವಿಜಯಪುರ: ಕಾರ್ಮಿಕರು ದೇಶದ ಆರ್ಥಿಕ ಅಭಿವೃದ್ಧಿ ಸಜೀವ ಸಂಪತ್ತು. ಆದ್ದರಿಂದ ಅವರ ಹಕ್ಕು ಬಾಧ್ಯತೆಗಳನ್ನು ಸರಕಾರ ಮತ್ತು ಉದ್ಯಮಗಳು ಸಕಾಲದಲ್ಲಿ ಪೂರೈಸಿ ಅವರ ಬದುಕನ್ನು ಸುಂದರಗೊಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ ರಾವ್ ಹೇಳಿದರು.
ನಗರದ ಕರ್ನಾಟಕ ಖಾದಿ ಗ್ರಾಮುದ್ಯೋಗ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಭಾರತ ಸೇವಾದಳ ಹಾಗೂ ಆಹೇರಿ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕಾರ್ಮಿಕರ ಹಕ್ಕು ಬಾಧ್ಯತೆಗಳು ಕುರಿತಾದ ಗೋಷ್ಠಿ ಹಾಗೂ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಯಾವುದೇ ದೇಶವು ಪ್ರಗತಿ ಮತ್ತು ಅಭಿವೃದ್ಧಿಯನ್ನು ಹೊಂದಬೇಕಾದರೆ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಕಲ್ಯಾಣ ಕಾರ್ಯಕ್ರಮ ನಿರೂಪಣೆ ಮತ್ತು ನೀತಿ ನಿರೂಪಕರಿಗೆ ಒಂದು ಸವಾಲಿನ ಕೆಲಸವಾಗಿದೆ. ಗೌರವಯುತವಾಗಿ ಕಾರ್ಯ ನಿರ್ವಹಿಸಲು ಕಾರ್ಮಿಕರಿಗೆ ಅಗತ್ಯವಾದ ಪರಿಸರ ನಿರ್ಮಾಣ ಕಾರ್ಮಿಕ ಶಕ್ತಿಯ ಸಮೃದ್ಧಿ ನೆಮ್ಮದಿಯ ಬದುಕನ್ನು ಖಾತ್ರಿ ಪಡಿಸುವ ವಾತಾವರಣ ಮುಂತಾದವು ಕಾರ್ಮಿಕರಿಗೆ ದೊರಕಬೇಕಾದ ಅಗತ್ಯತೆ ಇದೆ ಎಂದರು.
ಮಾಜಿ ಶಾಸಕ ಎನ್.ಎಸ್. ಖೇಡ ಮಾತನಾಡಿ, ದೇಶದ ಏಳ್ಗೆಗೆ ಅಲ್ಲಿನ ಶ್ರಮಜೀವಿಗಳ ದುಡಿತ ಮಹತ್ವದ್ದಾಗಿರುತ್ತದೆ. ದೇಶದ ಆರ್ಥಿಕ ರಂಗದ ಯಾವುದೇ ಕ್ಷೇತ್ರವಾಗಲಿ ಕೃಷಿ, ಗಣಿಗಾರಿಕೆ ಉತ್ಪಾದನಾ ವಲಯ, ಸೇವಾವಲಯ ಹೀಗೆ ಎಲ್ಲ ರಂಗದಲ್ಲಿ ಶ್ರಮಜೀವಿಗಳ ಪಾತ್ರ ಅತ್ಯಂತ ಹಿರಿಯದು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಯನ್ನು ಕಾರ್ಮಿಕ ಎಂದು ಪರಿಗಣಿಸಲಾಗುತ್ತದೆ. ಹೀಗೆಯೇ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ರೈತ ಮತ್ತು ಕೂಲಿಕಾರರು ಕೂಡ ಶ್ರಮಿಜೀವಿಗಳೇ. ಹಾಗೇಯೇ ಕಚೇರಿಗಳಲ್ಲಿ ಕೆಲಸ ಮಾಡುವರು ಕೂಡ ಶ್ರಮಜೀವಿಗಳೆನ್ನಬಹುದು ಎಂದರು.
ಚಿಂತಕ ಡಾ| ರಿಯಾಜ್ ಫಾರೂಕಿ ಮಾತನಾಡಿ, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ಭಾರತವಷ್ಟೆ ಅಲ್ಲದೇ ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಘ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ವಿಶ್ವದ ಎಲ್ಲ ರಾಷ್ಟ್ರಗಳು ಶ್ರಮಿಕ ವರ್ಗದ ಹಕ್ಕುಗಳನ್ನು ಮಾನ್ಯ ಮಾಡಿವೆ. ಆದ್ದರಿಂದ ನಮ್ಮ ದೇಶದಲ್ಲಿ ಯಾವುದೇ ಕಾರ್ಮಿಕರಿಗೆ ಯಾವುದೆ ವಲಯದಲ್ಲಿ ತಾರತಮ್ಯವಾಗದೆ ಸಮಾನ ವೇತನ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ನ್ಯಾಯವಾದಿ ಶ್ರೀಧರ ಕುಲಕರ್ಣಿ ಉಪನ್ಯಾಸ ನೀಡಿದರು. ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ, ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್. ಕಾಸನೀಸ, ಉದ್ಯಮಿ ಡಿ.ಎಸ್. ಗುಡ್ಡೋಡಗಿ, ನ್ಯಾಯವಾದಿಗಳಾದ ಶ್ರೀಶೈಲ ಸಜ್ಜನ, ಬಿ.ಎಂ. ನೂಲವಿ, ಡಿ.ಎಸ್. ಗೊಬ್ಬಣ್ಣವರ, ಶ್ರೀಪಾದ ಕುಲಕರ್ಣಿ, ಸಂಜೀವ ಪಾಟೀಲ ಇದ್ದರು.
ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿದರು. ಶ್ರೀಶೈಲ ತೇಲಿ ನಿರೂಪಿಸಿದರು. ಎಸ್.ಎಲ್. ಹಿರೇಮಠ ವಂದಿಸಿದರು.
ಕಾರ್ಮಿಕರಿಗೆ ಸನ್ಮಾನ: ಕಾರ್ಮಿಕ ಮುಖಂಡರಾದ ಭೀಮಶಿ ಕಲಾದಗಿ, ಅಣ್ಣಾರಾಯ ಈಳಗೇರ, ಸುರೇಖಾ ರಜಪೂತ, ಪ್ರಕಾಶ ಹಿಟ್ನಳ್ಳಿ ಲಕ್ಷ್ಮಣ ಹಂದ್ರಾಳ, ಸುರೇಶ ಜಿ.ಬಿ., ಶರಣಪ್ಪ ನಾಗವಾಡ, ಶೇಖರ ಹೂಗಾರ, ಉಮೇಶ ಮಣೂರ, ಎಸ್.ಎಂ. ಮಡಿವಾಳರ, ಶಾಂತಪ್ಪ ಚನ್ನಪಟ್ಟಣ, ಕಾಂತಪ್ಪ ಚನ್ನಪಟ್ಟಣ, ಬಸವರಾಜ ಮಡಿವಾಳರ, ಭಾರತಿ ವಾಲಿ, ಸುನಂದಾ ನಾಯಕ, ಕಾಳಮ್ಮ ಬಡಿಗೇರ, ಮಲಿಕಸಾಬ ಟಕ್ಕಳಕಿ, ರಾಜು ರಣದೇವಿ, ರಾಜು ಜಾಧವ ಹಾಗೂ ಆಪ್ತ ಸಮಾಲೋಚನೆ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ರವಿ ಕಿತ್ತೂರ ಅವರನ್ನು ಸನ್ಮಾನಿಸಲಾಯಿತು.