ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ, ಬಳಿಕ ಆಕೆಯನ್ನು ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
2018 ಜನೇವರಿ 27 ರಂದು ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಕಟನೂರು ಗ್ರಾಮದಲ್ಲಿ ಮೂತ್ರ ವಿಸರ್ಜನೆ ಮಾಡುವ ವಿಷಯದಲ್ಲಿ ಶಮಶಾದ್ ಮಕಾನದಾರ ಹಾಗೂ ಅಕ್ಬರಬಾಷಾ ಬಾಗವಾನ ಮಧ್ಯೆ ಜಗಳ ನಡೆದಿತ್ತು. ಅದೇ ದಿನ ಸಂಜೆ ಶಮಶಾದ ಅಕ್ಬರ್ ಮಕಾನದಾರ ತನ್ನ ಮಗಳು ಕೌಸರಬಿ ಜತೆ ಮನೆ ಮುಂದೆ ಮಗಳೊಂದಿಗೆ ಕುಳಿತಿದ್ದಾಗ ಪಕ್ಕದ ಮನೆಯ ನಿವಾಸಿ ಅಕ್ಬರಬಾಷಾ ಬಾಗವಾನ ಏಕಾಏಕಿ ಆಗಮಿಸಿ ಶಮಶಾದ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶಮಶಾದ 2018 ಫೆ.15 ರಂದು ಚಿಕಿತ್ಸೆ ಫಲಿಸದೇ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಸದರಿ ಘಟನೆ ಕುರಿತು ಗಾಯಾಳು ಶಮಶಾದ್ ನೀಡಿದ ದೂರಿದ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಸಿಂದಗಿ ಎಂ.ಕೆ.ದಾಮಣ್ಣವರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ 1ನೇ ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸತೀಶ ಎಲ್.ಪಿ. ಆರೋಪಿ ಅಕ್ಬರಸಾಬ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಇತರೆ 3 ಕಲಂಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ 2 ವರ್ಷ ಜೈಲು ಶಿಕ್ಷೆ ಹಾಗೂ 9 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಮೃತ ಮಹಿಳೆಯ ಕುಟುಂಬದವರಿಗೆ 5 ಲಕ್ಷ ರೂ. ಪರಿಃಆರ ನೀಡುವಂತೆ ಆದೇಶಿಸಿದ್ದಾರೆ.ಸರ್ಕಾರದ ಪರವಾಗಿ 1ನೇ ಅಧಿಕ ಸಹಾಯಕ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು.