ವಿಜಯಪುರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾದಲ್ಲಿ ಅಧಿಕಾರದ ಸುನಾಮಿ ಎಂಬಂತೆ ಆಡಳಿತ ಪಕ್ಷದ ಎಲ್ಲಾ ಐವರು ಶಾಸಕರಿಗೆ ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಮೂಲಕ ಬಸವನಾಡಿಗೆ ಅಧಿಕಾರ ಸಿಕ್ಕಿತ್ತು. ಇದೀಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನದ ಅವಕಾಶ ಸಿಗಲಿದೆ ಎಂಬ ಕುರಿತು ಭಾರಿ ಚರ್ಚೆ ನಡೆದಿದೆ.
Advertisement
ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 3 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ಕೂಡ ಮೂರು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷಗಳ ಐವರೂ ಶಾಸಕರಿಗೆ ಅಧಿಕಾರ ಸಿಕ್ಕಿತ್ತು. ಕುಮಾರಸ್ವಾಮಿ ನೇತೃತ್ವದ ಮಿತ್ರ ಪಕ್ಷಗಳ ಸರ್ಕಾರ ಪತನದ ಜೊತೆಗೆ ಜಿಲ್ಲೆಗೆ ಸಿಕ್ಕಿದ್ದ ಅಧಿಕಾರ ಭಾಗ್ಯವೂ ಕೈ ಚಲ್ಲಿದೆ.
Related Articles
Advertisement
ಆದರೆ ಇದೇ ವೇಳೆ ಯತ್ನಾಳ ಅವರು ಪಕ್ಷದಲ್ಲಿ ದೊಡ್ಡ ಮಟ್ಟದ ವಿರೋಧಿ ಪಾಳೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ವಾಚಾಮಗೋಚರ ಟೀಕಿಸಿದ ಫಲವಾಗಿ 2012ರಲ್ಲಿ ಪಕ್ಷದಿಂದ ಉಚ್ಛಾಟಿತರಾಗಿ, 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೇರಿ ವಿಜಯಪುರ ನಗರ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಬಳಿಕ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಮತ್ತೆ ಬಿಜೆಪಿಗೆ ಬಂದರೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವರಾಗಿದ್ದ ರಮೇಶ ಜಿಗಜಿಣಗಿ ವಿರುದ್ದ ಮಾತನಾಡಿ ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿದ್ದರು. 2018 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿ ಸೇರಿ, ಮೇಲ್ಮನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಗರ ಕ್ಷೇತ್ರ ಬಿಜೆಪಿ ಶಾಸಕರಾಗಿದ್ದಾರೆ.
ಈ ಹಂತದಲ್ಲೂ ಕೂಡ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವರ ಪರ ಪ್ರಚಾರ ಮಾಡಲಾರೆ ಎಂದು ಮುನಿಸಿಕೊಂಡು ವಿಜಯಪುರ ಕ್ಷೇತ್ರದ ಹೊರತಾದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದರು. ಹೀಗಾಗಿ ಕೇಂದ್ರದಲ್ಲಿ ಇದೀಗ ಪ್ರಧಾನಿ ಮೋದಿ ಬಳಗದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ತಮ್ಮನ್ನು ಸೋಲಿಸಲು ಯತ್ನಿಸಿದ ಯತ್ನಾಳ ಸಚಿವ ಸ್ಥಾನ ನೀಡದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ದೂರು ನೀಡುವ ಸಾಧ್ಯತೆ ಇಲ್ಲ.
ಈ ಮಧ್ಯೆ ಯತ್ನಾಳ ಅವರನ್ನು ಸೋಲಿಸುವ ಮೂಲಕ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಎ.ಎಸ್. ಪಾಟೀಲ ನಡಹಳ್ಳಿ ಇದೀಗ ಮುದ್ದೇಬಿಹಾಳ ಬಿಜೆಪಿ ಶಾಸಕ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಮುದ್ದೇಬಿಹಾಳ ಕ್ಷೇತ್ರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ವೀರ ಎಂಬ ಹಿರಿಮೆಯೊಂದಿಗೆ ವಿಧಾನಸೌಧದ ಮೆಟ್ಟಿಲೇರಿದ್ದಾರೆ. ಮೂರು ಬಾರಿ ಶಾಸಕನಾಗಿರುವ ಹಿರಿತನ ಇದ್ದರೂ ಪಕ್ಷದಲ್ಲಿ ಯಡಿಯೂರಪ್ಪ ಹೊರತಾಗಿ ಇತರೆ ನಾಯಕರ ಬೆಂಬಲ ಇಲ್ಲ. ಆದರೆ ಯತ್ನಾಳ ವಿರೋಧಿ ಬಣ ನಡಹಳ್ಳಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ತೆರೆಮರೆಯಲ್ಲಿ ಮಾತ್ರವಲ್ಲ ಅಗತ್ಯ ಬಿದ್ದರೆ ಬಹಿರಂಗವಾಗಿಯೇ ಧ್ವನಿ ಎತ್ತುವ ಸಾಧ್ಯತೆ ಇಲ್ಲದಿಲ್ಲ.
ಇನ್ನು ಮೊದಲ ಬಾರಿಗೆ ಶಾಸಕರಾಗಿರುವ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಸಾಧ್ಯವಿಲ್ಲ. ಆದರೆ ರಾಜಕೀಯ ಮೇಲಾಟದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದಕ್ಕಿಸಿಕೊಂಡರೆ ಆಶ್ಚರ್ಯವಿಲ್ಲ.
ಕೇಂದ್ರ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಯತ್ನಾಳ, ಯತ್ನಾಳ ವಿರೋಧಿ ಪಾಳೆಯದ ಬೆಂಬಲ ಹಾಗೂ ರಾಜ್ಯದ ಮಟ್ಟದ ಕೆಲವು ನಾಯಕರ ಬೆಂಬಲದೊಂದಿಗೆ ನಡಹಳ್ಳಿ ಇಬ್ಬರೂ ಸಚಿವರಾದರೂ ಅಚ್ಚರಿ ಪಡಬೇಕಿಲ್ಲ.