Advertisement

Vijayapura; ಏರ್ ಲಿಫ್ಟ್ ಮೂಲಕ ಬಿಹಾರಕ್ಕೆ ಶವಗಳ ರವಾನೆ; ಘಟಕದ ಮಾಲೀಕರ ವಿರುದ್ಧ ಪ್ರಕರಣ

02:16 PM Dec 05, 2023 | Team Udayavani |

ವಿಜಯಪುರ: ಅಲಿಯಾಬಾದ್ ಕೈಗಾರಿಕಾ ಪ್ರದೇಶದ ಫುಡ್ ಪ್ರೊಸೆಸ್ ಘಟಕದ ದುರಂತದಲ್ಲಿ ಮೃತ 7 ಕಾರ್ಮಿಕರ ಪ್ರತಿ ಕುಟುಬಕ್ಕೆ ಸರ್ಕಾರದಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಕೈಗಾರಿಕಾ ಸಚಿವರೂ ಆಗಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ, ಕಾರ್ಮಿಕರ ಪಾರ್ಥಿವ ಶರೀರಗಳಿಗೆ ಪುಷ್ಪಗೌರವ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮತಾನಾಡಿದ ಅವರು, ಘಟನಾ ಸ್ಥಳದಲ್ಲಿ ಪತ್ತೆಯಾದ ಏಳು ಶವಗಳನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿ,‌ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಸಹವರ್ತಿ ಕಾರ್ಮಿಕರ ಕೋರಿಕೆಯಂತೆ ಮರಣೋತ್ತರ ಪರೀಕ್ಷೆ ನಡೆಸಿದ್ದು, 7 ಕಾರ್ಮಿಕರ ಶವಗಳನ್ನು ಏರ್ ಲಿಫ್ಟ್ ಮೂಲಕ ಬಿಹಾರ ರಾಜ್ಯಕ್ಕೆ ರವಾನಿಸಿ, ಅವರ ಕುಟುಂಬದವರಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ರಾಜಗುರು ಪುಡ್ಸ್ ಪ್ರಸೊಸ್ ಘಟಕದ ಮಾಲೀಕ ಕಿಶೋರ ಜೈನ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ., ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಜೈನ್ ಸಮಾಜದವರು ಕೂಡ ಪರಿಹಾರ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಒಂದೊಮ್ಮೆ ಅವರು ಪರಿಹಾರದ ಹಣ ನೀಡದಿದ್ದರೆ ನಾನು ಕಾರ್ಮಿಕರಿಗೆ ಹಣ ನೀಡುವೆ ಎಂದು ಭರವಸೆ ನೀಡಿದ ಸಚಿವ ಎಂ.ಬಿ.ಪಾಟೀಲ, ರಾಜ್ಯ ಸರ್ಕಾರದಿಂದಲೂ‌ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.  ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಹಣ ನೀಡಲಾಗುತ್ತದೆ. ಇದು ನಮ್ಮ ಸರ್ಕಾರ ಹಾಗೂ ನಮ್ಮ ಬದ್ಧತೆ ಎಂದು ವಿವರಿಸಿದರು.

ದುರಂತ ಘಟನೆಯ ವರದಿಯಾಗುತ್ತಲೇ ಸ್ಥಳಕ್ಕೆ ಧಾವಿಸಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಎಸ್.ಡಿ.ಆರ್.ಎಫ್. ಹಾಗೂ ಎನ್ ಡಿ.ಆರ್.ಎಫ್. ತಂಡ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿ ಇತರೆ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

Advertisement

ಪ್ರಕರಣ ದಾಖಲು: ದುರಂತದಲ್ಲಿ ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆಹಾರ ಸಂಸ್ಕರಣಾ ಘಟಕದ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಎಪಿಎಂಸಿ ಠಾಣೆಯಲ್ಲಿ ಬಿಹಾರದ ಸಮಷ್ಟಿಪುರ ಜಿಲ್ಲೆಯ ಬಿತಾಲದಿಯಾಗಾಂ ಮೂಲದ  ಸಹಕಾರ್ಮಿಕ ಅಮರಹೀತ್ ಸಾಹೋ ಚಂದ್ರಭೂಷಣ ದೂರು ದಾಖಲಿಸಿದ್ದಾರೆ.

ರಾಜಗುರು ಫುಡ್ ಪ್ರೊಸೆಸ್ ಫರ್ಮ ಮಾಲೀಕ ಕಿಶೋರಕುಮಾರ ಹಂಜಾರಿಮಲ್ ಜೈನ್, ಸೂಪರವೈಸರ್ ಪ್ರವೀಣಚಂದ್ರ ವೀರಚಂದ್ರ ಶ್ರೀವೇದಿ ಇವರ ವಿರುದ್ದ ಕಲಂ 86/2023 ಕಲಂ:  337.338.287.304(A) ಐಪಿಸಿ ಅನ್ವಯ ಪ್ರಕರಣ ದಾಖಲಾಗಿದೆ.

ಮೆಕ್ಕೆಜೋಳ ಸ್ವಚ್ಛಗೊಳಿಸುವ ಘಟಕದಲ್ಲಿ ಯಂತ್ರ ದುರ್ಬಲವಾಗಿದೆ ಎಂದು ತಿಳಿದಿದ್ದರೂ ಘಟಕದ ಮಾಲೀಕ ದುರಸ್ತಿ ಮಾಡಿಸದೇ ನಿರ್ಲಕ್ಷ ಮಾಡಿದ್ದಾರೆ. ಕಾರ್ಮಿಕರು ಕೆಲಸ ಮಾಡುವಾಗ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಕಿಶನಕುಮಾರ, ರಾಜೇಶಕುಮಾರ್ ಮುಖಿಯ, ಸಂಬು ಮುಖಿಯ, ಲುಖೋ ಯಾದವ್, ರಾಮಬ್ರಿಚ್ ಮುಖಿಯ, ರಾಮಬಾಲಕ ಮುಖಿಯ, ದುಲ್ಹರಚಂದ್ ಮುಖಿಯ ಇವರ ಸಾವಿಗೆ ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಇದಲ್ಲದೇ ಘಟನೆಯಲ್ಲಿ ಸೋನು ಕರಾಮಚಂದ, ರವೀಂಶಕುಮಾರ, ಅನಿಲ, ಕಲ್ಮೇಶ್ವರ್ ಮುಖಿಯ, ಕಿಶೋರ್ ಹಂಜಾರಿಮಲ ಜೈನ, ಪ್ರಕಾಶ ಧುಮಗೊಂಡ ಇವರು ಗಾಯಗೊಳ್ಳಲು ಕಾರಣವಾಗಿದ್ದಾರೆ ಎಂದು ಪ್ತಕರಣ ದಾಖಲಾದ ದೂರಿನಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next