Advertisement

ಅಭಿವೃದ್ಧಿಗೆ ಕಾರವಾರ ಮಾದರಿ

11:54 AM Sep 26, 2019 | Naveen |
„ಜಿ.ಎಸ್‌. ಕಮತರ
ವಿಜಯಪುರ: ಐತಿಹಾಸಿಕವಾಗಿ ಅಪರೂಪದ ಪಾರಂಪರಿಕ ಸ್ಮಾರಕಗಳನ್ನು ಮಡಿಲಲ್ಲಿ ಇರಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭ್ಯುದಯಕ್ಕೆ ಕೊನೆಗೂ ಕಾಯಕಲ್ಪ ಸಿಗುವ ಮುನ್ಸೂಚನೆ ದೊರಕುತ್ತಿದೆ.
‘ಉದಯವಾಣಿ” ಪತ್ರಿಕೆ ಪ್ರವಾಸೋದ್ಯಮ ಕಥೆ-ವ್ಯಥೆ ಅಭಿಯಾನದ ಮೂಲಕ ವಿಶೇಷ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಸದ್ದಿಲ್ಲದೇ ಜಿಲ್ಲೆಯ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆ ರೂಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಜಿಲ್ಲೆಯ ಅಧಿಕಾರಿಯೊಬ್ಬರ ನೇತೃತ್ವದ ತಂಡ ಅನ್ಯ ಜಿಲ್ಲೆಗಳ ಪ್ರವಾಸೋದ್ಯಮ ಅಧ್ಯಯನ ನಡೆಸಿದ್ದು ವಿಶ್ವ ಪ್ರವಾಸೋದ್ಯಮ ದಿನವಾದ ಸೆ. 27ರಂದು ಸದರಿ ಅಧ್ಯಯನದ ಫ‌ಲ ದೊರಕುವ ನಿರೀಕ್ಷೆ ಇದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಭಿವೃದ್ಧಿಗೆ ಸಹಕಾರ ನೀಡದೇ ಅನಗತ್ಯ ತಕರಾರು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಎಎಸ್‌ಐ ಸಹವಾಸವೇ ಇಲ್ಲದೇ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪಣ ತೊಟ್ಟಿದೆ ಜಿಲ್ಲಾಡಳಿತ.
ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹಾಗೂ ಆಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಆದರೆ ತಾವು ಮಾಡಲು ಹೊರಟ ಕೆಲಸಕ್ಕೆ ಮಾಧ್ಯಮಗಳ ಪ್ರಚಾರ ಪಡೆಯದೇ
ಕಾರ್ಯೋನ್ಮುಖರಾಗಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಮೊದಲ ಭಾಗವಾಗಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ| ಔದ್ರಾಮ್‌, ವಿಜಯಪುರ ಜಿಲ್ಲಾ ಪ್ರವಾಸಿ ಸಮಾಲೋಚಕ ಮಿಥುರಡ್ಡಿ, ಜಗದೇವ ಗುಣಕಿ ಅವರನ್ನು
ಒಳಗೊಂಡ ತಂಡ ಪ್ರವಾಸೋದ್ಯಮದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿರುವ ಕಡಲ ತೀರದ ಜಿಲ್ಲೆ ಕಾರವಾರಕ್ಕೆ ಅಧ್ಯಯನ ನಡೆಸಿ, ಕಳೆದ ವಾರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.
ಕಾರವಾರದಲ್ಲಿ ಪ್ರವಾಸಿಗರು ಸಮುದ್ರದ ಆಳಕ್ಕೆ ಹೋದ ಸಂದರ್ಭದಲ್ಲಿ ಹಲವರು ಜೀವ ಕಳೆದುಕೊಳ್ಳುತ್ತಿದ್ದರು. ಸಮುದ್ರ ತೀರದಲ್ಲಿ ಪ್ರವಾಸಿಗರಿಂದ ಸೃಷ್ಟಿಯಾಗುತ್ತಿದ್ದ ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗಿ ಇಡೀ ಸಮುದ್ರ ತೀರ ಮಾಲಿನ್ಯದಿಂದ ಕೂಡಿತ್ತು. ಆದರೆ ಇಂತ ಸಂದರ್ಭದಲ್ಲಿ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿ ಮುಂದಿಟ್ಟುಕೊಂಡು ಹೊಣೆಯಿಂದ ನುಣುಚಿಕೊಳ್ಳುತ್ತಿದ್ದವು.
ಸಮಿತಿ ರಚನೆ: ಕಾರವಾರ ಜಿಲ್ಲಾಧಿಕಾರಿಯಾಗಿದ್ದ ಎಸ್‌.ಎಸ್‌. ನಕುಲ ಅವರು ಇಂಥ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ| ರವೀಂದ್ರನಾಥ ಠ್ಯಾಗೋರ ಕಡಲ ತೀರ ಸಂರಕ್ಷಣೆ ನೋಂದಾಯಿತ ಸಮಿತಿ ರಚಿಸಲಾಗಿದೆ. ಈ ಸಮಿತಿ ಸರ್ಕಾರದಿಂದ ಮೂಲಭೂತ ಸೌಲಭ್ಯ ಕಲ್ಪಿಸಿಯೂ ನಿರ್ವಹಣೆ ಹೊಣೆ ಇಲ್ಲದ ಪ್ರದೇಶಗಳನ್ನು ತನ್ನ ಸ್ವಾಧೀನಕ್ಕೆ ಪಡೆದು ಅಭಿವೃದ್ಧಿ ಪಡಿಸುವುದು. ಅದರಿಂದ ಬರುವ ಆದಾಯವನ್ನು ಸಮುದ್ರದಲ್ಲಿ ಜೀವ ರಕ್ಷಕರ ಪಡೆ, ಸಮುದ್ರ ತೀರ ಹಾಗೂ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆಂದೆ ಸಮಿತಿ ಪ್ರತ್ಯೇಕ ಸಿಬ್ಬಂದಿ ನೇಮಿಸಿದ್ದು 80 ಜನರಿಗೆ ಉದ್ಯೋಗ ಕಲ್ಪಿಸಿದೆ. ಈ ಸಮಿತಿಗೆ ಸ್ಥಾನಿಕವಾಗಿ ಪ್ರವಾಸಿಗರಿಂದ ಆದಾಯ ಬರುವಂತೆ ವ್ಯವಸ್ಥೆ ಮಾಡಿದೆ. ಆರ್‌.ವಿ. ದೇಶಪಾಂಡೆ ಅವರು ಕಾರವಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಚಾಲನೆ ಪಡೆದಿರುವ ಈ ಸಮಿತಿ ಅತ್ಯಂತ ಯಶಸ್ವಿಯಾಗಿ ಮಾದರಿ ಎನಿಸಿದೆ.
ಇದಲ್ಲದೇ ದಶಕದ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಅಭಿವೃದ್ಧಿ ವಿಷಯದಲ್ಲಿ ದರ್ಪಣ ಜೈನ್‌ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಅವಳಿ ನಗರಗಳ ಸಮಗ್ರ ಅಭಿವೃದ್ಧಿಗೆ ಇದೇ ಮಾದರಿಯಲ್ಲಿ ಸಮಿತಿ ರಚಿಸಿ, ಉಣಕಲ್‌ ಕೆರೆ, ಗ್ಲಾಸ್‌ಹೌಸ್‌, ವರಕವಿ ಡಾ| ದ.ರಾ. ಬೇಂದ್ರ ಅವರು ನಡೆದಾಡಿದನ ನೆಲ ಸಾಧನಕೇರಿ ಸೇರಿದಂತೆ ಹಲವು ಪ್ರದೇಶಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇರುವ ಇಂತ ಅಭಿವೃದ್ಧಿ ಮಾಡಿದೆ.
ಸಮಗ್ರ ಅಧ್ಯಯನ: ಕಾರವಾರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸಮಿತಿ ವ್ಯಾಪ್ತಿ, ಕಾರ್ಯಶೈಲಿ ಕುರಿತು ಸಮಗ್ರ ಅಧ್ಯಯನ ಮಾಡಿ ಬಂದಿರುವ ತಂಡ ನೀಡಿರುವ ವರದಿ ಆಧಾರಸಿ ಅಭಿವೃದ್ಧಿ ಸಮಿತಿ ರಚನೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಕಾರವಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವಂತೆ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯೊಂದು ಅಸ್ತಿತ್ವಕ್ಕೆ ಬರಲಿದೆ.
ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಐತಿಹಾಸಿಕ 96 ಸ್ಮಾರಕ ಹಾಗೂ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ 45 ಸ್ಮಾರಕಗಳಿವೆ. ಜಿಲ್ಲೆಯಲ್ಲಿ ಅದರಲ್ಲೂ ವಿಜಯಪುರ ನಗರದಲ್ಲಿ ಈ ಎರಡೂ ಇಲಾಖೆಗಳ ವ್ಯಾಪ್ತಿಯಲ್ಲಿ ಇಲ್ಲದ ಹಲವು ಸ್ಮಾರಕಗಳು ಹಾಗೂ ಪ್ರವಾಸಿಯೋಗ್ಯ ತಾಣಗಳಿವೆ. ಇಂತ ತಾಣಗಳನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಲು ಸಿದ್ದವಾಗಿರುವ ಸಮಿತಿ ಕೈಗೆತ್ತಿಕೊಳ್ಳಲು ಮುಂದಾಗಲಿದೆ. ನಗರದಲ್ಲಿರುವ ಆನಂದ ಮಹಲ್‌ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳ ವ್ಯಾಪ್ತಿಯಲ್ಲಿ ಇಲ್ಲ. ಜಿಲ್ಲೆಯಲ್ಲಿ ಇಂಥ ಹಲವು ಸ್ಮಾರಕಗಳಿದ್ದು, ಪಟ್ಟಿ ಮಾಡಲು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮಾಲೋಚಕ ಮಿಥುನರಡ್ಡಿ ಅವರನ್ನು ಸಮೀಕ್ಷಕರನ್ನಾಗಿ ನೇಮಿಸಿದೆ.
ಇದಲ್ಲದೇ ನಗರದ ಇಕ್ಕೆಲಗಳಲ್ಲಿ ಜಲರಾಶಿಯಿಂದ ತುಂಬಿರುವ ಐತಿಹಾಸಿಕ ಎರಡು ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಇರುವ ಬೇಗಂ ತಾಲಾಬ್‌ ಕೆರೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಹೂಳೆತ್ತಿ, ನದಿಯಿಂದ ನೀರು ತುಂಬಿಸಲಾಗಿದೆ. ಸಾಲದ್ದಕ್ಕೆ ಇಡಿ ಕೆರೆ ಪರಿಸರದಲ್ಲಿ ವಾಕಿಂಗ್‌ ಪಾತ್‌ ಸೇರಿದಂತೆ 11 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ಅಭಿವೃದ್ಧಿ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯ ಈ ಕೆರೆ ಪ್ರದೇಶದಲ್ಲಿ ರೆಸ್ಟೋರೆಂಟ್‌ ಮಾಡಲು ನಿರ್ಮಿಸಿರುವ ಕಟ್ಟಡ ನಿರ್ವಹಣೆ ಯಾರದ್ದು ಎಂಬ ಚಿಂತೆ ಕಾಡುತ್ತಿದೆ. ಹೀಗಾಗಿ ಸದರಿ ಕೆರೆಯಲ್ಲಿ ಬೋಟಿಂಗ್‌ ಆರಂಭಿಸಿ, ರೆಸ್ಟೋರೆಂಟ್‌, ಕೆರೆ ಸುತ್ತಲೂ ಸ್ವತ್ಛತೆ ಹಾಗೂ ರಕ್ಷಣೆ ಹೊಣೆಯನ್ನು ಟೆಂಡರ್‌ ನೀಡಲು ಜಿಲ್ಲೆಯ ಉದ್ದೇಶಿತ ಅಭಿವೃದ್ಧಿ ಸಮಿತಿಗೆ ವಹಿಸಲು ಯೋಚಿಲಾಗಿದೆ.
ಉದ್ಯೋಗಾವಕಾಶ: ಮತ್ತೂಂದೆಡೆ ಸರ್‌.ಎಂ. ವಿಶ್ವೇಶ್ವರಯ್ಯ ಅವರಿಂದ ನಿರ್ಮಾಣಗೊಂಡು ಶತಮಾನ ಕಂಡಿರುವ ಭೂತನಾಳ ಕೆರೆಯಲ್ಲೂ ಹೂಳು ಎತ್ತಿ ಕೆರೆಗೆ ನೀರು ತುಂಬಿಸುವ ಶಾಶ್ವತ ಯೋಜನೆ ರೂಪಿಸಲಾಗಿದೆ. ಈ ಕೆರೆ ಪರಿಸರದಲ್ಲಿ ವೃಕ್ಷ ಅಭಿಯಾನ ಯೋಜನೆಯಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದು, ಅರಣ್ಯ ಇಲಾಖೆಯಿಂದ ಉದ್ಯಾನ ನಿರ್ಮಿಸಲಾಗಿದೆ. ಈ ಕೆರೆ ಪ್ರದೇಶದಲ್ಲಿ ಕೂಡ ಪ್ರವಾಸಿ ಯೋಗ್ಯ ಪರಿಸರಕ್ಕೆ ವ್ಯವಸ್ಥೆ ಮಾಡಿ ಈ ಕೆರೆಯಲ್ಲಿ ಕೂಡ ಬೋಟಿಂಗ್‌ ಆರಂಭಿಸಲು ಚಿಂತನೆ ನಡೆದಿದೆ.
ಅಂದುಕೊಂಡಂತೆ ನಡೆದಲ್ಲಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಈ ಬೆಳವಣಿಗೆಯಿಂದ ಕನಿಷ್ಠ 200 ಜನರಿಗೆ ಸಮಿತಿ ನೇರ ಉದ್ಯೋಗ ಕಲ್ಪಿಸಲು ಅವಕಾಶವಿದೆ. ಅಲ್ಲದೇ ಪರೋಕ್ಷವಾಗಿ ಸುಮಾರು ಸಾವಿರಾರು ಜನರು ಉದ್ಯೋಗ ಪಡೆಯಲು ಅವಕಾಶಗಳಿವೆ.
ನಾಳೆ ಸಮಿತಿ ಅಸ್ತಿತ್ವಕ್ಕೆ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಪ್ರವಾಸಿ ತಜ್ಞರನ್ನು ಒಳಗೊಂಡಂತೆ ಸುಮಾರು 30 ಸದಸ್ಯರ ಸಮಿತಿಯೊಂದು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಮತ್ತು ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಸಮಿತಿ ಹೆಸರಿನ ಈ ಸಮಿತಿ ನೋಂದಣಿ ಆಗಲಿದೆ.
ಅಪರ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುವ ಈ ಸಮಿತಿ ವಿಶ್ವ ಪ್ರವಾಸೋದ್ಯಮ ದಿನವಾದ ಸೆ. 27ರಂದು ಅಸ್ತಿತ್ವಕ್ಕೆ ತರಲು ಸಿದ್ಧತೆ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿದಲ್ಲಿ ಅದೇ ದಿನ ಸಮಿತಿ ನೋಂದಣಿ ಕೂಡ ನಡೆಯಲಿದೆ.
ಸಚಿವ ಸಿ.ಸಿ. ಪಾಟೀಲ ಅವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಐತಿಹಾಸಿಕ ವಿಜಯಪುರ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಈ ಹಂತದಲ್ಲೇ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಹಲವು ಮಹತ್ವ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಪ್ರತ್ಯೇಕ ವೆಬ್‌ಸೈಟ್‌, ಐತಿಹಾಸಿಕ ಬಾರಾಕಮಾನ್‌ ಸುತ್ತಲೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮತ್ತೂಂದೆಡೆ ಪ್ರವಾಸೋದ್ಯಮ ದಿನದಂದೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಐತಿಹಾಸಿಕ ಗಗನಮಹಲ್‌ ಕಂದಕದಲ್ಲಿ ಬೋಟಿಂಗ್‌ ಆರಂಭಿಸಲು ಟೆಂಡರ್‌ ಕರೆದು, ಬಿಡ್‌ ದಾರರನ್ನು ಅಂತಿಮಗೊಳಿಸುವ ಹಂತ ತಲುದೆ. ಈ ಹಂತದಲ್ಲಿ ಎಎಸ್‌ಐ ಸ್ಥಳೀಯ ಅಧಿಕಾರಿಗಳು ತಕರಾರು ತೆಗೆದಿರುವ ಕಾರಣ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಎಎಸ್‌ಐ ನವದೆಹಲಿ ಕೇಂದ್ರ ಕಚೇರಿಗೆ ಪರವಾನಿಗೆಗೆ ಪತ್ರ ಬರೆದಿದ್ದಾರೆ. ಆದರೆ ಅಲ್ಲಿಂತ ಯಾವ ಉತ್ತರ ಬಂದಿಲ್ಲ. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ನಗರದ ಹೊರ ವಲಯದಲ್ಲಿರುವ ಐತಿಹಾಸಿಕ ಬೇಗಂ ತಲಾಬ್‌ನಲ್ಲಿ ಬೋಟಿಂಗ್‌ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ತೊಡಕಾಗಿರುವ ಎಎಸ್‌ಐ ಅಧಿಕಾರಿಗಳ ವರ್ತನೆಗೆ ಸೂಕ್ತ ಉತ್ತರ ಕೊಡಲು ಮುಂದಾಗಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next