ವಿಜಯಪುರ: ವಿಫಲ ಕೊಳವೆ ಬಾವಿಗೆ ಬಿದ್ದಿರುವ ಲಚ್ಯಾಣದ ಸಾತ್ವಿಕ್ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಗು ಸುರಕ್ಷಿತವಾಗಿದೆ, ಉಸಿರಾಟಕ್ಕೆ ಸಮಸ್ಯೆ ಆಗದಂತೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ 10 ಅಡಿ ಆಳದ ಬಳಿಕ ಕಾಣಿಸಿಕೊಂಡಿರುವ ಭಾರಿ ಗಾತ್ರದ ಬಂಡೆಗಲ್ಲು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.
ಕೊಳವೆ ಬಾವಿಯ 16 ಅಡಿ ಆಳದಲ್ಲಿ ಸಾತ್ವಿಕ ಸಿಲುಕಿಕೊಂಡಿದ್ದು, ಭರದಿಂದ ಸಾಗಿಗಿರುವ ರಕ್ಷಣಾ ಕಾರ್ಯಾಚರಣೆಯಿಂದಾಗಿ ಈಗಾಗಲೇ ಸುಮಾರು 20 ಅಡಿ ದೂರದಿಂದ 10 ಅಡಿ ಆಳದ ವರೆಗೂ ಭೂಮಿ ಅಗೆದಿರುವ ರಕ್ಷಣಾ ಕಾರ್ಯಾಚರಣೆ ತಂಡ ಸಾತ್ವಿಕ್ ಸಿಲುಕಿರುವ ಸ್ಥಳದತ್ತ ಹೊರಟಿದ್ದಾರೆ.
ಆದರೆ 10 ಅಡಿ ಆಳದ ಬಳಿಕ ಭಾರಿ ಗಾತ್ರದ ಬಂಡೆ ಕಾಣಿಸಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಟೋನ್ ಬ್ರೇಕರ್ ಯಂತ್ರದ ಸಹಾಯದಿಂದ ಬಂಡೆಗಲ್ಲು ಒಡೆಯುವ ಕೆಲಸದಲ್ಲಿ ತೊಡಗಿದ್ದು, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಶೇ.30 ರಷ್ಟು ಮಾತ್ರ ಬಂಡೆಗಲ್ಲು ಒಡೆಯಲಾಗಿತ್ತು.
ಮಗು ಸಾತ್ವಿಕ್ 16 ಅಡಿ ಆಳಕ್ಕೆ ಸಿಲುಕಿದ್ದು, ಮಗು ಕನಿಷ್ಠ 2 ಅಡಿ ಎತ್ತರ ಇದ್ದು, ರಕ್ಷಣಾ ತಂಡ 20 ಅಡಿ ಆಳದ ವರೆಗೂ ಭೂಮಿಯನ್ನು ಅಗೆದು, ಬಳಿಕ ಸುರಂಗದ ಮೂಲಕ ಮಗು ಸಿಲುಕಿರುವ ಸ್ಥಳಕ್ಕೆ ಹೋಗಬೇಕಿದೆ.
ಈ ಮಧ್ಯೆ ಘಟನಾ ಸ್ಥಳದಲ್ಲಿ ಕತ್ತಲು ಆವರಿಸಿದ್ದರೂ ಜನರು ಸ್ಥಳಕ್ಕೆ ಧಾವಿಸಿ ಬರುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ವಿಜಯಪುರ ಜಿಲ್ಲೆ ಮಾತ್ರವಲ್ಲದೆ ನೆರೆಯ ಕಲಬುರಗಿ, ಮಹಾರಾಷ್ಟ್ರ ರಾಜ್ಯದಿಂದಲೂ ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿ ಬರುತ್ತಿದ್ದು, ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಸಮಸ್ಯೆಯಾಗಿದೆ.
ಈ ಮಧ್ಯೆ ಸಾತ್ವಿಕ ರಕ್ಷಣಾ ಕಾರ್ಯಕ್ಕೆ ಬೆಳಗಾಯಿಂದ ಶ್ರೀಶೈಲ ಚೌಗಲಾ ನೇತೃತ್ವದಲ್ಲಿ ಎಸ್.ಡಿ.ಆರ್.ಎಫ್. ತಂಡ ಲಚ್ಯಾಣ ಗ್ರಾಮದ ಸ್ಥಳದತ್ತ ಧಾವಿಸುತ್ತಿದೆ. ಕಲಬುರಗಿಯ ಎಸ್. ಡಿ.ಆರ್.ಎಫ್. ತಂಡವನ್ನು ಕರೆಸಲಾಗುತ್ತಿದೆ.