Advertisement

ಬಡವರಿಗೆ ಅನ್ಯಾಯವಾಗಲೂ ಬಿಡಲ್ಲ

07:59 PM Nov 29, 2019 | Naveen |

ವಿಜಯಪುರ: ನಗರದ ಅಭಿವೃದ್ಧಿಗಾಗಿ ರಸ್ತೆ ಅಗಲೀಕರಣದಂಥ ಕೆಲಸಗಳನ್ನು ವಿರೋಧಿ ಸುವುದಿಲ್ಲ. ಹಾಗಂತ ರಸ್ತೆ ಅಗಲೀಕರಣದ ಹೆಸರಿನಲ್ಲಿ ಬೀದಿ ಬದಿ ಬಡ ವ್ಯಾಪಾರಿಗಳಿಗೆ ಅನ್ಯಾಯ ಆಗುವುದನ್ನು ನೋಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬದ್ಧವಾಗಿದ್ದೇನೆ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

Advertisement

ಗುರುವಾರ ನಗರದಲ್ಲಿರುವ ನೆಹರು ಮಾರುಕಟ್ಟೆ ಪ್ರದೇಶದಲ್ಲಿ ತಮ್ಮನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸಿರುವ ಬೀದಿ ಬದಿ ವ್ಯಾಪಾರಿಗಳ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಎಂ.ಬಿ. ಪಾಟೀಲ, ತೆರವು ಕಾರ್ಯಾಚರಣೆ ನಡೆಸಿದ ದಿನದಂದಲೇ ನಾನು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಅಲ್ಲದೇ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ನಿರಂತರ ಮಾತುಕತೆ ನಡೆಸಿದ್ದೇನೆ ಎಂದು ವಿವರಿಸಿದರು.

ನೆಹರು ಮಾರುಕಟ್ಟೆಯಲ್ಲಿ ತೆರವುಗೊಂಡ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಾನು ಬದ್ಧವಾಗಿದ್ದೇನೆ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳು ಭಯ ಪಡುವ ಅಗತ್ಯವಿಲ್ಲ. ಪರ್ಯಾಯ ವ್ಯವಸ್ಥೆ ಆಗುವವರೆಗೂ ಮೂಲ ಸ್ಥಳದಲ್ಲಿ ವ್ಯಾಪಾರ ನಡೆಸಲು ಅನುಮತಿ ಕೊಡಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಪರ್ಯಾಯ ವ್ಯವಸ್ಥೆ ಕಲ್ಪಿಸದೇ, ಮುನ್ಸೂಚನೆಯನ್ನೂ ನೀಡದೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಏಕಾಏಕಿ ನೆಹರು ಮಾರುಕಟ್ಟೆ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಿರುವ ಕ್ರಮ ಸರಿಯಲ್ಲ. ಸ್ಥಳಾಂತರಕ್ಕೆ ಪೂರ್ವದಲ್ಲಿ ವ್ಯಾಪಾರಸ್ಥರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕಿತ್ತು ಎಂದರು.

ಬೀದಿ ಬದಿ ವ್ಯಾಪಾರದಿಂದಲೇ ನಿತ್ಯದ ಜೀವನ ನಡೆಸುವ ನೂರಾರು ಕುಟುಂಬಗಳು ಏಕಾಏಕಿ ಉದ್ಯೋಗ ಕಳೆದುಕೊಂಡರೆ ಸಹಿಸಲಾಗದು. ಇಂತಹ ಸಂದರ್ಭದಲ್ಲಿ ನಷ್ಟಕ್ಕೆ ಸಿಲಕಿರುವ ಬೀದಿಬದಿ ವ್ಯಾಪಾರಿಗಳಿಗೆ ನಾನು ಸೇರಿದಂತೆ ಎಲ್ಲರೂ ನೆರವಿಗೆ ನಿಲ್ಲಬೇಕು. ತಮ್ಮ ಬದುಕು ಬೀದಿಗೆ ಬಿದ್ದಿದ್ದರೂ ಸಂತ್ರಸ್ತ ವ್ಯಾಪಾರಿಗಳು ಸಂಯಮದಿಂದ ವರ್ತಿಸುತ್ತಿರುವುದು ಅನುಕರಣೀಯ. ನಿಮ್ಮ ನ್ಯಾಯ ಸಮ್ಮತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

Advertisement

ಗಾಂಧಿ ಚೌಕ್‌ ಪೊಲೀಸ್‌ ಠಾಣೆಯ ಆವರಣದಲ್ಲಿ ತರಕಾರಿ ವ್ಯಾಪಾರಕ್ಕೆ ಅನುಮತಿ ನೀಡಬೇಕು ಎಂದು ಅನೇಕ ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸ್‌ ಇಲಾಖೆಗೆ ತನ್ನದೇ ಆದ ನಿಯಮಾವಳಿಗಳಿವೆ. ಹೀಗಾಗಿ ಅದು ಕಷ್ಟಸಾಧ್ಯವಾದ ಮಾತು ಎಂದು ಉದಾಹರಣೆಯೊಂದನ್ನು ಉಲ್ಲೇಖೀಸಿದ ಅವರು, ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ತಿಕೋಟಾ ಪೊಲೀಸ್‌ ಠಾಣೆಯ ಆವರಣದಲ್ಲಿ ದ್ರಾಕ್ಷಿ ವಿಚಾರ ಸಂಕಿರಣ ಆಯೋಜಿಸುವ ಕುರಿತಂತೆ ಅನುಮತಿ ಕೋರಿ ಪತ್ರ ಬರೆದಿದ್ದೆ, ಗೃಹ ಸಚಿವನಾಗಿದ್ದರೂ ಅನುಮತಿ ದೊರಕಲಿಲ್ಲ, ಕಾರಣ ಪೊಲೀಸ್‌ ಇಲಾಖೆಗೆ ತನ್ನದೇ ಆದ ನಿಬಂಧನೆಗಳಿವೆ. ಹೀಗಾಗಿ ಆ ಜಾಗ ಒದಗಿಸುವುದು ಕಷ್ಟ ಸಾಧ್ಯ. ಆದರೂ ನನ್ನ ಪ್ರಯತ್ನ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ವಿಜಯಪುರ ತರಕಾರಿ-ಹಣ್ಣು ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಲೀಂ ಮುಂಡೇವಾಡಿ, ಎಪಿಎಂಸಿ ತರಕಾರಿ-ಹಣ್ಣು ವ್ಯಾಪಾರಿಗಳ ಸಂಘದ ಅಬೂಬಕರ್‌ ಬಾಗವಾನ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ್‌ ರಜಾಕ್‌ ಹೊರ್ತಿ, ಮೈನುದ್ದೀನ್‌ ಬೀಳಗಿ, ಅಬ್ದುಲ್‌ ಹಮೀದ್‌ ಮುಶ್ರೀಫ್‌, ಪ್ರೊ.ವಾಜೀದ ಪೀರಾ, ಸೈಯ್ಯದ್‌ಆಸೀಪುಲ್ಲಾ ಖಾದ್ರಿ, ಅಡಿವೆಪ್ಪ ಸಾಲಗಲ್ಲ, ಅಜೀಂ ನಾಮದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next