ವಿಜಯಪುರ: ಕೋವಿಡ್ ಸೋಂಕಿನ ಆತಂಕದ ಮಧ್ಯೆಯೂ ಜಿಲ್ಲಾಡಳಿತ ಎಸ್ಸೆಸ್ಸೆಲ್ಸಿ ಪರೀಕ್ಷಾ ಸುರಕ್ಷತೆಗೆ ಕೈಗೊಂಡ ವಿವಿಧ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ಆರಂಭಿಸಿದ್ದಾರೆ.
ಶೈಕ್ಷಣಿಕ ಜೀವನದ ವಿಶಿಷ್ಟ ಅನುಭವ ನೀಡಿದ ಪರೀಕ್ಷೆ ಪ್ರಥಮ ದಿನ ಜಿಲ್ಲೆಯಲ್ಲಿ ಎಲ್ಲಿಯೂ ಪರೀಕ್ಷಾ ಅಕ್ರಮ ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳಾಗಲಿ, ನಕಲು, ಡಿಬಾರ್ ನಂತ ಅಕ್ರಮಗಳ ವರದಿ ಇಲ್ಲದೇ ಯಶಸ್ವಿಯಾಗಿ ಮುಗಿಸಿದ್ದಾರೆ. ಕೋವಿಡ್ ಸೋಂಕಿನ ಭಯದಲ್ಲೇ ಪರೀಕ್ಷಾ ಕೇಂದ್ರಕ್ಕೆ ಕಾಲಿಟ್ಟ ಪರೀಕ್ಷಾರ್ಥಿಗಳು ಜಿಲ್ಲಾದ್ಯಂತ ತೆರೆದಿರುವ 106 ಮುಖ್ಯ ಹಾಗೂ 15 ಉಪ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದ ಆವರಣ ಪ್ರವೇಶದ ಹಂತದಲ್ಲೇ ಸಾಮಾಜಿಕ ಅಂತರದೊಂದಿಗೆ ಕೇಂದ್ರಕ್ಕೆ ಆಗಮಿಸಲು ಸುಣ್ಣದ ಗೆರೆಗಳಿಂದ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು.
ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಸಿದ್ದ ಅಭ್ಯರ್ಥಿಗಳಲ್ಲಿ 1,986 ಮಕ್ಕಳು ಪರೀಕ್ಷೆಗೆ ಗೈರು ಹಾಜರಾಗಿದ್ದರೆ, 34,832 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶದ 103 ಮಕ್ಕಳಲ್ಲಿ 68 ಮಕ್ಕಳು ಮಾತ್ರ ಪರೀಕ್ಷೆ ಬರೆದಿದ್ದು, ಇತರರು ಗೈರು ಹಾಜಗಾರಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೂ ಸಾಮಾಜಿಕ ಅಂತರ ಕಡ್ಡಾಯ ಪಾಲನೆಗೆ ಕ್ರಮ ಕೈಗೊಂಡಿದ್ದು, ಮೂರು ಅಡಿ ಮೀರಿದಂತೆ ಆಸನ ವ್ಯವಸ್ಥೆ ಮಾಡಿದ್ದು, ಜಿಗ್‌ಜಾಗ್ ಪದ್ಧತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಕೊಠಡಿಯ ವಿಸ್ತೀರ್ಣಕ್ಕೆ ತಕ್ಕಂತೆ 18-20 ಪರೀಕ್ಷಾರ್ಥಿಗಳಿಗೆ ನೋಂದಣಿ ಸಂಖ್ಯೆ ನೀಡಲಾಗಿತ್ತು.
ಪರೀಕ್ಷಾ ಸಂದರ್ಭದಲ್ಲಿ ಪರೀಕ್ಷಾರ್ಥಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ, ಪರೀಕ್ಷಾ ಕೊಠಡಿ ಮಾಹಿತಿ ನೀಡುವುದು ಸೇರಿದಂತೆ ಪರೀಕ್ಷಾ ಕೆಲಸಕ್ಕೆ ನೆರವಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಸೇವೆ ಸಲ್ಲಿಸಿದರು. ಪರೀಕ್ಷಾ ಕೇಂದ್ರದ ಸುತ್ತಲೂ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡುವ ಅನುಮಾನದಿಂದ ಝರಾಕ್ಸ್, ಕಂಪ್ಯೂಟರ್, ಇಂಟರ್ ನೆಟ್ ಕೆಫೆ, ಕೋಚಿಂಗ್ ಸೆಂಟರ್ ಸೇರಿದಂತೆ ಎಲ್ಲ ಅಂಗಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಿಸಲಾಗಿತ್ತು.