ವಿಜಯಪುರ: ಕೋವಿಡ್-19 ನಾಲ್ಕನೇ ಹಂತದ ಲಾಕ್‌ಡೌನ್ ಹಂತದಲ್ಲಿ ನಿರ್ಬಂಧದಲ್ಲಿ ಕೆಲಸ ಸಡಿಲಿಕೆ ಮಾಡಿದ್ದರೂ ಸರ್ಕಾರಗಳು ಹಲವು ನಿಯಮ ಪಾಲನೆ ಕಡ್ಡಾಯ ಮಾಡಿದೆ. ಆದರೆ, ನಗರದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುನ್ನೆಚರಿಕೆ ಕ್ರಮಗಳನ್ನು ಪಾಲಿಸದೇ ಸಾಮಾನ್ಯವಾಗಿ ಓಡಾಡುವುದು ಕಂಡು ಬರುತ್ತಿದೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರ ಸ್ಥಳ ಎನಿಸಿರುವ ಮಹಾತ್ಮಾ ಗಾಂಧೀಜಿ ವೃತ್ತ, ಸಿದ್ಧೇಶ್ವರ ರಸ್ತೆ, ಕಿತ್ತೂರ ಚನ್ನಮ್ಮ ಮಾರುಕಟ್ಟೆ ಪ್ರದೇಶ, ಲಾಲ್ ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳು ಸೇರಿದಂತೆ ಎಲ್ಲಿಯೂ ಸಾಮಾಜಿಕ ಅಂತರವಾಗಲಿ, ಸ್ಯಾನಿಟೈಸರ್ ಬಳಕೆಯಾಗಲಿ ಕಂಡು ಬರಲಿಲ್ಲ. ಪ್ರಮುಖ ರಸ್ತೆಗಳಲ್ಲಿ ಗುಂಪಾಗಿ ಓಡಾಡುವುದು, ಮಾಸ್ಕ್ ಧರಿಸುವ ನಿಯಮವನ್ನೂ ಪಾಲಿಸದಿರುವುದು ಕಂಡು ಬಂತು. ಕೆಲವರು ಮಾಸ್ಕ್ ಇದ್ದರೂ ಧರಿಸದೇ ಕೊರಳಿಗೆ ನೇತು ಹಾಕಿಕೊಂಡು ಓಡಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು. ಇದರೊಂದಿಗೆ ನಾಲ್ಕನೇ ಲಾಕ್ ಡೌನ್ ಜಾರಿಯಲ್ಲಿ ಸಡಿಲಿಕೆ ಮೂಲಕ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಸೂಚನೆಗೆ ಬೆಲೆ ಇಲ್ಲದಂತಾಗಿತ್ತು.
ಸುಮಾರು ಎರಡು ತಿಂಗಳ ಹಿಂದೆ ಜಾರಿಗೆ ತರಲಾಗಿದ್ದ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಸಂಪೂರ್ಣ ನಿರ್ಬಂಧ ಹೇರಲಾಗಿದ್ದ ಕಟಿಂಗ್ ಶಾಪ್ ಗಳನ್ನು ತೆರತೆಯಲು ಷರತ್ತಿನೊಂದಿಗೆ ಅನುಮತಿಸಲಾಗಿದೆ. ಆದರೆ, ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‌ಗಳಂಥ ಸುರಕ್ಷತಾ ಕ್ರಮ ಕಡ್ಡಾಯವಾಗಿ ಪಾಲಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳುವಲ್ಲಿ ಪೂರ್ವ ಸಿದ್ಧತೆ ಇಲ್ಲದ ಕಾರಣ ಬಹುತೇಕ ಕಟಿಂಗ್ ಶಾಪ್‌ಗ್ಳು ತೆರೆದಿರಲಿಲ್ಲ. ಲಾಕ್ ಡೌನ್ ಬಳಿಕ ಎರಡು ತಿಂಗಳಿಂದ ತಲೆಗೂದಲು ಹಾಗೂ ಗಡ್ಡ-ಮೀಸೆ ಕತ್ತರಿಸಿಕೊಳ್ಳಲಾಗದ ಜನರು ಅಲ್ಲಲ್ಲಿ ತೆರೆದಿದ್ದ ಕೆಲವೇ ಕಟಿಂಗ್ ಶಾಪ್‌ಗ್ಳಲ್ಲಿ ಮುಗಿಬಿದ್ದೂ ಕಂಡುಬಂತು. ನಗರದಲ್ಲಿ ಮಂಗಳವಾರ ಸಂಚಾರ ಜೋರಾಗಿತ್ತು, ಅಲ್ಲಲ್ಲಿ ಆಟೋಗಳು ಓಡಾಡಿದರೂ ಪೊಲೀಸರ ಆಕ್ಷೇಪದಿಂದಾಗಿ ಬಡಾವಣೆಗಳನ್ನು ಬಳಸಿ ಓಡಾಡ ಆರಂಭಿಸಿದ್ದವು. ಸಾರಿಗೆ ಸಂಸ್ಥೆ ನಗರ ಸಾರಿಗೆ ಪುನರಾರಂಭ ಮಾಡಿದ್ದರೂ ಸಾರ್ವಜನಿಕರ ಓಡಾಟ ನಿರೀಕ್ಷಿತ ಪ್ರಮಾಣದಲ್ಲಿ ಕಂಡು ಬರಲಿಲ್ಲ.