Advertisement

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

03:31 PM Nov 29, 2024 | keerthan |

ವಿಜಯಪುರ: ಕಾಂಗ್ರೆಸ್ ಒಂದೂವರೆ ವರ್ಷದ ಆಡಳಿತದ ಬಳಿಕ ದ್ವೇಷದ ರಾಜಕಾರಣ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಇವರು ಮಾಡಿದ್ದು ಏನು? ಸಿದ್ದರಾಮಯ್ಯ ಈಗ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಮಾಜಿ‌ ಸಿಎಂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪದ ತನಿಖೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಹಗರಣ ಗಂಭೀರತೆ ಪಡೆದುಕೊಂಡಿದೆ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಹೈಕೋರ್ಟ್ ನಿಗಾದಲ್ಲಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಇಷ್ಟು ದಿನ ಅವರಿವರು ಹೊಂದಾಣಿಕೆಯಲ್ಲಿದ್ದರು. ನಮ್ಮದನ್ನು ನೀವು ಮುಚ್ಚಿಡುವುದು, ನಿಮ್ಮದನ್ನು ನಾವು ಮುಚ್ಚಿಡುವುದು ಎಂಬ ಒಪ್ಪಂದವಿತ್ತು, ಆ ಕರಾರು ಮುರಿದು ಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ, ರಾಜಕೀಯ ನಿವೃತ್ತಿಯಾಗಿರುವ ಯಡಿಯೂರಪ್ಪರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ತಮ್ಮ ವಿರುದ್ದ ಮಾಜಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲಫೂಟ್ ನನ್ ಮಕ್ಕಳ ಯಾವುದೇ ಪ್ರತಿಕ್ರಿಯೆ ಕೇಳಬೇಡಿ ಎಂದರು. ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಗ್ಗೆ ಪ್ರಶ್ನೆ ಕೇಳಿ ಎಂದರು.

ಮಂಡ್ಯದಲ್ಲಿ ತಮ್ಮ ವಿರುದ್ದದ ರಕ್ತ ಚಳುವಳಿ ವಿಚಾರಕ್ಕೆ ಮಾತನಾಡಿದ ಯತ್ನಾಳ್‌, ಅದು ಯಾವ ರಕ್ತ ಇದೆಯೋ ಯಾರಿಗೆ ಗೊತ್ತು, ಅದು ಅವರದದೆ ರಕ್ತವೋ, ಮತ್ಯಾರದ್ದೋ ರಕ್ತವೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ, ನನ್ನ ವಿರುದ್ಧ ರಕ್ತ ಚಳುವಳಿ ಏನು ಮಾಡುತ್ತಾರೆ? ಮೊದಲು ಮಂಡ್ಯದಲ್ಲಿ ನಮ್ಮ ಪಕ್ಷದ ನಾಲ್ಕು ಶಾಸಕರನ್ನಾಗಿ ಮಾಡಿ ಎಂದರು.

ಮಂಡ್ಯದಲ್ಲಿರುವ ಭೂಕನಕೆರೆ ವಿಜಯೇಂದ್ರನ ಅಪ್ಪನ ಊರು. ಭೂಕನಕೆರೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ. ಅವರು ನನಗೆ ರಕ್ತದಲ್ಲಿ ಪತ್ರ ಬರೆಯುತ್ತಾರಂತೆ ಎಂದು ಕುಟುಕಿದರು.

Advertisement

ಶಿವಮೊಗ್ಗ, ಶಿಕಾರಿಪುರದಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದರೆ ಒಂದು ಔಚಿತ್ಯವಿತ್ತು. ಯಾವ ಬಿಜೆಪಿಯ ಜನಪ್ರತಿನಿಧಿಯೂ ಇಲ್ಲದ ಮಂಡ್ಯದಲ್ಲಿ ಕೇವಲ ಆರು ಜನರು ಕೈಗೆ ಚುಚ್ಚಿಕೊಂಡು ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ. ದುಡ್ಡು ಪಡೆದುಕೊಂಡು ಹೀಗೆ ಮಾಡುತ್ತಿದ್ದಾರೆ, ಯಾರು ಏನು ಬೇಕಾದರೂ ಮಾಡಲಿ ನಾನು ತಲೆಕೆಡಿಸಿಕೊಳ್ಳಲ್ಲ. ಶಿಫಾರಸ್ಸು ಮಾಡಲಿ ಕೋರ್ ಕಮಿಟಿಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲಿ, ನಾವು ವಕ್ಪ್ ಹೋರಾಟವನ್ನು ಕೈ ಬಿಡಲ್ಲ. ಪ್ರಧಾನಿ ಅವರು ಹೇಳಿದಂತೆ ವಂಶವಾದ ಭ್ರಷ್ಟಾಚಾರ ರಾಜಕಾರಣದ ವಿರುದ್ಧ ಹೋರಾಡುವೆ, ಅದು ನಮ್ಮ ಪಕ್ಷವೇ ಇರಲಿ, ಬೇರೆ ಪಕ್ಷವೇ ಇರಲಿ ಎಂದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಇಲ್ಲ. ನಾನು ಹೊಂದಾಣಿಕೆ ಮಾಡಿಕೊಂಡಿದ್ದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಸಿಎಂ ಹಾಗೂ ಡಿಸಿಎಂ 42 ಕೇಸುಗಳನ್ನು ಹಾಕುತ್ತಿರಲಿಲ್ಲ. ವಿಜಯೇಂದ್ರನ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ. ಯಡಿಯೂರಪ್ಪ ವಿರುದ್ಧ ಎಷ್ಟೇ ಗಂಭೀರ ಪ್ರಕರಣಗಳಿದ್ದರೂ ಮುಚ್ಚಿಟ್ಟಿದ್ದರು. ಈಗ ಬಿಎಸ್ ವೈ ಪ್ರಕರಣಗಳನ್ನು ತೆಗೆಯುತ್ತಿದ್ದಾರೆ. ಅವರವರದ್ದು ಹಳಸಿದೆ, ಹಳಸಿದ್ದಕ್ಕೆ ಹಸಿದಿದ್ದಕ್ಕೆ ಒಂದಾಗಿವೆ ಎಂದು ಯತ್ನಾಳ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next