ವಿಜಯಪುರ: ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಾಗಿರುವ ಕ್ರೀಡಾಪಟುಗಳು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಹಾಗೂ ಸೂಕ್ತ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಥ ಕ್ರೀಡಾಪಟುಗಳ ನೆರವಿಗೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹಾಸಿಂಪೀರ ವಾಲೀಕಾರ ಹೇಳಿದರು.
ಹಿಟ್ಟಿನಹಳ್ಳಿ ಗ್ರಾಮದ ಮಾರುತೇಶ್ವರ ಮತ್ತು ದ್ಯಾಮಗಂಗಾ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ವಲಯದ ಕ್ರೀಡಾಪಟುಗಳು ಹಲವು ಸಂದರ್ಭಗಳಲ್ಲಿ ದೈಹಿಕವಾಗಿ ಸದೃಢರಾಗಿದ್ದರೂ ಕಾಲ ಕಾಲಕ್ಕೆ ತರಬೇತಿ ದೊರಯುವುದಿಲ್ಲ. ಗ್ರಾಮೀಣ ಕ್ರೀಡಾಪಟುಗಳು ಆರ್ಥಿಕವಾಗಿ ದುರ್ಬಲವಾಗಿರುವುದರಿಂದ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.
ಭಾರತದಲ್ಲಿ ಎಲ್ಲ ತರಹದ ಕ್ರೀಡಾಪಟುಗಳು ದೊರಕುತ್ತಾರೆ. ಆದರೆ ಅವರಿಗೆ ವಿಶೇಷ ತರಬೇತಿ ಕೊರತೆ ಉಂಟಾಗುತ್ತಿದೆ. ಇದರಿಂದ ಕ್ರೀಡಾ ಜೀವನದಲ್ಲಿ ಗುರಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಇಂಥ ಕ್ರೀಡಾಪಟುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಸೂಕ್ತ ತರಬೇತಿಗೆ ವ್ಯವಸ್ಥೆ ಮಾಡಬೇಕು. ಇದರಿಂದ ಭಾರತೀಯ ಕ್ರೀಡಾ ಕ್ಷೇತ್ರ ಇನ್ನಷ್ಟು ಶ್ರೀಮಂತಗೊಳ್ಳಲು ಸಹಕಾರಿ ಆಗಲಿದೆ. ಕ್ರೀಡಾ ಇಲಾಖೆ ಉತ್ತಮ ಕ್ರೀಡಾಪಟುಗಳನ್ನು ದತ್ತು ಪಡೆದು ಅವರ ಕ್ರೀಡಾ ವೆಚ್ಚ ಭರಿಸಲು ಮುಂದಾಗಬೇಕು ಎಂದರು.
ವಿಶ್ರಾಂತ ದೈಹಿಕ ಶಿಕ್ಷಕ ಆರ್.ಬಿ. ಬಿರಾದಾರ ಮಾತನಾಡಿ, ಕ್ರೀಡಾಪಟುಗಳಲ್ಲಿರುವ ಆಸಕ್ತಿ ಗುರುತಿಸಿ ಸಮಾಜ ಪೋಷಿಸಬೇಕು. ಪ್ರಸಕ್ತ ಸಂದರ್ಭದಲ್ಲಿ ಯಶಸ್ವಿ ಕ್ರೀಡಾಪಟುಗಳ ಕೊರತೆ ಎದುರಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಮಕ್ಕಳ ಪಾಲಕರು ಕ್ರೀಡೆಗೆ ಹೆಚ್ಚು ಮಹತ್ವ ನೀಡದೆ ಅಂಕಗಳನ್ನು ಗಳಿಸುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಶಾಲಾ ಕಾಲೇಜುಗಳು ಕೂಡ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಅಂಕ ಗಳಿಕೆ ಹುಚ್ಚಿಗೆ ಬಿದ್ದಿರುವುದರಿಂದ ಕ್ರೀಡೆಗೆ ಅನಾಸಕ್ತಿ ತೊರಿಸುತ್ತಿವೆ. ಹೀಗಾಗಿ ಕ್ರೀಡಾಪಟುಗಳ ಕೊರತೆ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶ್ರಾಂತ ಬ್ಯಾಂಕ್ ಅಧಿಕಾರಿ ಶ್ರೀಕಾಂತ ಗೊಂಗಡಿ, ರಾಮಗೊಂಡ ಬಿರಾದಾರ, ಶ್ರೀಕಾಂತ ಚೌಧರಿ, ರವಿ ಬಿರಾದಾರ, ರಾಕೇಶ ನಾಟೀಕಾರ, ಮಾರುತಿ ಸುಬೇದಾರ, ಆದಿಲ ಮುಲ್ಲಾ, ಈರಣ್ಣ ಬಿರಾದಾರ, ನಜರಖಾನ್ ವಾಲೀಕಾರ ಇದ್ದರು.
ಹಿಟ್ಟಿನಹಳ್ಳಿ, ಮನಗೂಳಿ, ಹೊನಗನಹಳ್ಳಿ, ಬಬಲೇಶ್ವರ, ಮಮದಾಪುರ, ಶಿವಣಗಿ, ಹೊನವಾಡ, ಯರನಾಳ, ಮುತ್ತಗಿ, ಗೊಳಸಂಗಿ ಮುಂತಾದ ಗ್ರಾಮಗಳಿಂದ ತಂಡಗಳು ಆಗಮಿಸಿದ್ದವು.