Advertisement

ಅಪಘಾತ ವಲಯ ಗುರುತಿಸಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

01:07 PM Jun 02, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ಅತಿಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಆಪಘಾತ ವಲಯ ಎಂದು ಮುನ್ನೆಚ್ಚರಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳಕರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ರಾಷ್ಟ್ರದಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸಿರುವ 5 ರಾಜ್ಯಗಳನ್ನು ಗುರುತಿಸಲಾಗಿದ್ದು ಇದರಲ್ಲಿ ಕರ್ನಾಟಕ ರಾಜ್ಯವೂ ಸೇರಿದೆ. ಹೀಗಾಗಿ ರಾಜ್ಯದಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು ಅದರನ್ವಯ ರಾಜ್ಯ ಹಾಗೂ ಜಿಲ್ಲೆಯಲ್ಲಿ ಅಪಘಾತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಅತಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸುವ ಜೊತೆಗೆ ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು, ಆಂತರಿಕ ರಸ್ತೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ಅಪಘಾತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕ್ರಿಯಾಯೋಜನೆ ಸಿದ್ಧಪಡಿಸಬೇಕು.

ಜಿಪಂ, ಲೋಕೋಪಯೋಗಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಇತರೆ ರಸ್ತೆ ನಿರ್ಮಾಣ ಜವಾಬ್ದಾರಿ ಹೊಂದಿರುವ ಇಲಾಖೆಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ ಪ್ರತ್ಯೇಕ ಅನುದಾನ ಲಭ್ಯವಿದೆ. ಈ ಅನುದಾನ ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ಹೆಚ್ಚುವರಿ ಅನುದಾನದ ಅಗತ್ಯದ ಕುರಿತು ತಕ್ಷಣ ಹೆಚ್ಚು ಅಪಘಾತ ನಡೆಯುವ ಸ್ಥಳ ಗುರುತಿಸಿ ಕ್ರಿಯಾಯೋಜನೆ ರೂಪಿಸಬೇಕು. ಈ ಕ್ರಿಯಾಯೋಜನೆಗೆ ತ್ವರಿತವಾಗಿ ರಸ್ತೆ ಸುರಕ್ಷತಾ ಸಮಿತಿಯಿಂದ ಅನುಮೋದನೆ ಪಡೆದು ಸಂಬಂಧಪಟ್ಟ ಆಯಾ ಇಲಾಖೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಿಕೊಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಲು ಅನುಕೂಲವಾಗುವಂತೆ ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದನ್ನು ತಕ್ಷಣ ತಡೆ ಹಿಡಿಯಬೇಕು. ಇದಕ್ಕಾಗಿ ನಿರಂತರ ನಿಗಾ ಇರಿಸಿ ನಗರ-ಗ್ರಾಮಾಂತರ ವ್ಯಾಪ್ತಿಯಲ್ಲಿ ಸರಕು ವಾಹನಗಳ ಮೂಲಕ ಪ್ರಯಾಣಿಕರ ಸಾಗಾಣಿಕೆ ತಡೆದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ರಸ್ತೆ ಸುರಕ್ಷತಾ ಕಾನೂನು ಉಲ್ಲಂಘಿಸುವವರ ವಿರುದ್ಧ ಲೈಸನ್ಸ್‌ ಅಮಾನತು-ರದ್ಧತಿ, ಪ್ರಕರಣ ದಾಖಲಿಸುವ ಕ್ರಮಕ್ಕೂ ಮುಂದಾಗಬೇಕು ಎಂದು ಸೂಚಿಸಿದರು.

Advertisement

ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ 3 ಕಿ.ಮೀ.ಗಿಂತಲೂ ದೂರಿನಿಂದ ಮಕ್ಕಳಿಗೆ ಲಭ್ಯವಿರುವ ಸಾರಿಗೆ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಬೇಕು. ಶಾಲಾ ವಾಹನ, ಮಕ್ಕಳ ಅಂಕಿಸಂಖ್ಯೆ ಸಹಿತ ಶಾಲಾ ವಾಹನಗಳ ಲೈಸನ್ಸ್‌ ಇರುವಿಕೆ ಕುರಿತು ಪರಿಶೀಲನೆ ನಡೆಸಬೇಕು. ಆಯಾ ಶಾಲಾ ಪ್ರಾಚಾರ್ಯರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರದ ಬರೆದು, ವಾಹನ ಇರುವಿಕೆ ಹಾಗೂ ಇಲ್ಲದಿರುವಿಕೆ ಕುರಿತು ಸಮಗ್ರ ಅಂಕಿ-ಅಂಶ ಸಂಗ್ರಹಿಸಬೇಕು.

ಜಿಲ್ಲೆಯಾದ್ಯಂತ ಸಂಚರಿಸುವ ಸಾರಿಗೆ ಸಂಸ್ಥೆ ಹಾಗೂ ವಿವಿಧ ಬಸ್‌ ಮತ್ತು ಖಾಸಗಿ ವಾಹನಗಳು ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವುದನ್ನು ನಿಯಂತ್ರಿಸಬೇಕು. ಜಿಲ್ಲೆಯ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ವೇಳಾಪಟ್ಟಿ ಅನ್ವಯ ಪ್ರಕರಣ ದಾಖಲಿಸುವ ಕ್ರಮ ಜರುಗಿಸಬೇಕು. ಜೂನ್‌ ತಿಂಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳು ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಎಸ್ಪಿ ಪ್ರಕಾಶ ನಿಕ್ಕಂ ಮಾತನಾಡಿ, ಅಪಘಾತ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ನಿಗಾ ಇಡಬೇಕು. ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಗ್ಗಿಸುವ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next