ವಿಜಯಪುರ: ಕೋವಿಡ್-19 ಲಾಕ್‌ಡೌನ್ ನಿರ್ಬಂಧದಿಂದಾಗಿ ಕೃಷಿ-ತೋಟಗಾರಿಕೆ ಕೆಲಸಕ್ಕಾಗಲಿ, ಉತ್ಪನ್ನಗಳ ಸಾಗಾಟ, ಮಾರಾಟಕ್ಕಾಗಲಿ ನಿರ್ಬಂಧ ಇಲ್ಲ. ಪರಿಸ್ಥಿತಿ ದುರ್ಲಾಭ ಪಡೆಯಲು ಮುಂದಾದಲ್ಲಿ ಎಪಿಎಂಸಿ ಏಜೆಂಟರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಖಚಿತ. ರೈತರು, ವ್ಯಾಪಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯು ಎಂದು ಕೃಷಿ ಮಂತ್ರಿ ಬಿ.ಸಿ. ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಜಿಪಂ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಎಪಿಎಂಸಿ, ಮೀನುಗಾರಿಕೆ ಇಲಾ ಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಚರ್ಚೆ ನಡೆಸಿದ ಅವರು, ರೈತರು ತಮ್ಮ ಉತ್ಪನ್ನ ಸಾಗಾಟ ಹಾಗೂ ಮಾರುಕಟ್ಟೆಗೆ ಸಾಗಿಸಲು ಅಧಿಕಾರಿಗಳು-ಪೊಲೀಸರು ತೊಂದರೆ ಕೊಡದೇ ನೆರವು ನೀಡಬೇಕು. ಜಿಲ್ಲೆಯ ರೈತರು ಕೂಡ ಈ ಸಂಕಷ್ಟದ ಸಂದರ್ಭದಲ್ಲಿ ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಒಣದ್ರಾಕ್ಷಿ ಬೆಳೆ ಆನ್‌ಲೈನ್ ಟ್ರೇಡಿಂಗ್ ಮುಂದುವರೆಸುವ ಜತೆಗೆ ಮಹಾರಾಷ್ಟ್ರದಿಂದ ಡಿಪ್ಪಿಂಗ್ ಆಯಿಲ್ ತರಿಸಿಕೊಳ್ಳಲು ಸಹಕಾರ ನೀಡಬೇಕು. ಹಸಿದ್ರಾಕ್ಷಿ, ನಿಂಬೆ, ದಾಳಿಂಬೆ, ತರಕಾರಿ ಸೇರಿದಂತೆ ರೈತರು ಬೆಳೆಯುವ ಯಾವುದೇ ಕೃಷಿ-ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಗಾಟ, ಮಾರಾಟದಲ್ಲಿ ಶೋಷಣೆ ಮಾಡುವಂತಹ ಮಧ್ಯವರ್ತಿ ಏಜೆಂಟರ್ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಲು ಸೂಚಿಸಿದ ಅವರು, ಹಾಪ್‌ಕಾಮ್ಸ್ ಮೂಲಕ ತರಕಾರಿ, ಹಣ್ಣು ಮತ್ತು ಮೊಟ್ಟೆ ಮಾರಾಟಕ್ಕೆ ಮಾಡುವ ವ್ಯವಸ್ಥೆಯನ್ನು ಇನ್ನೂ ಬಲಪಡಿಸಬೇಕು. ಕೊರೊನಾ ಲಾಕ್‌ಡೌನ್ ಪರಿಸ್ಥಿತಿಯ ದುರ್ಲಾಭ ಪಡೆದು ರೈತರಿಗೆ ತೊಂದರೆ ನೀಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದ್ರಾಕ್ಷಿಬೆಳೆ ಅನುಕೂಲಕ್ಕಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 2850 ಟನ್ ಸಂಗ್ರಹ ಸಾಮರ್ಥ್ಯದ ಕೋಲ್ಡ್ ರೆಸ್ಟೋರೆಜ್ ಇದ್ದು, ರೈತರು ದ್ರಾಕ್ಷಿ ಸರ್ಕಾರ ಉಚಿತ ಸೌಲಭ್ಯ ಕಲ್ಪಿಸಿದೆ. ಇದಲ್ಲದೇ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಬೆಳೆ ಹಾಳಾಗದಂತೆ ವೈನ್ ತಯಾರಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಿದ ಪ್ರಕರಣ ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಿ, ಅಧಿ ಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ವಿಭಾಗದಲ್ಲಿ ಅಗ್ರಿಲೆಂಡಿಂಗ್ ಹೆಚ್ಚಿದೆ. ಸಾಲ ವಿತರಣೆಯಲ್ಲಿ ನೂತನ ತಂತ್ರಾಂಶ ಅಳವಡಿಸಿದ್ದರಿಂದ ರೈತರು ರಿಯಾಯಿತಿ ಪಡೆಯುವಲ್ಲಿ ತೊಂದರೆಯಾಗುತ್ತಿದೆ. ಈ ಕುರಿತು ಸಹಕಾರ ಸಚಿವರೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದಲ್ಲದೇ ಕೋಳಿ, ಕಲ್ಲಂಗಡಿ ಹಣ್ಣಿನ ಕುರಿತು ಅಪಪ್ರಚಾರ ಮಾಡಿದ್ದರಿಂದ ರೈತರು ಲಕ್ಷಾಂತರ ಕೋಳಿಗಳನ್ನು ಹತ್ಯೆ ಮಾಡಿದರು, ಕೋಳಿಗೆ ಆಹಾರವಾಗಬೇಕಿದ್ದ ಮೆಕ್ಕೆಜೋಳಕ್ಕೂ ಬೆಲೆ ಇಲ್ಲದಂತಾಯ್ತು. ಮತ್ತೂಂದೆಡೆ ಕಲ್ಲಂಗಡಿ ಹಣ್ಣಿನ ಕುರಿತೂ ಅಪಪ್ರಚಾರ ಮಾಡಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲಕುವಂತಾಯಿತು. ಭವಿಷ್ಯದಲ್ಲಿ ಇಂಥ ಅಪಪ್ರಚಾರ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಅಗತ್ಯ ಎಂದರು.
ಸಭೆಯಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಜಿಲ್ಲೆಯ ರೈತರು ಹಾಗೂ ಕೃಷಿ ವ್ಯವಸ್ಥೆ ಅನುಭವಿಸುತ್ತಿರುವ ಸಮಸ್ಯೆ ಕುರಿತು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವ್ಹಾಣ, ವಿಪ ಸದಸ್ಯಅರುಣ್ ಶಹಾಪೂರ, ಜಿಲ್ಲಾಧಿಕಾರಿ ವೈ.ಎಸ್ .ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಪಂ
ಸಿಇಒ ಗೋವಿಂದರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.