Advertisement

ರೋಗಿಗಳ ಮೇಲೆ ನಿಗಾ ಇಡಿ: ಪಾಟೀಲ

06:53 PM Jun 18, 2020 | Naveen |

ವಿಜಯಪುರ: ಜಿಲ್ಲೆಯ ಖಾಸಗಿ ವೈದ್ಯರ ಬಳಿ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿತ ಯಾವುದೇ ರೋಗಿಗಳು ಬಂದಲ್ಲಿ ತಕ್ಷಣ ನೋಡಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಂಟಲು ದ್ರವ ಮಾದರಿ ಪಡೆಯಲು ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ -19 ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡುವ ನೆಗಡಿ, ಕೆಮ್ಮು, ಜ್ವರ, ಹಾಗೂ ತೀವ್ರ ಉಸಿರಾಟ ತೊಂದರೆ ರೋಗಿಗಳ ಬಗ್ಗೆ ನೋಡಲ್‌ ಅಧಿಕಾರಿ ಭೀಮರಾವ್‌ ಮಮದಾಪುರಗೆ ಮಾಹಿತಿ ನೀಡಬೇಕು ಎಂದರು. ಮಾಹಿತಿ ಲಭ್ಯವಾಗುತ್ತಲೇ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಬೇಕು. ತೀವ್ರ ಉಸಿರಾಟ ತೊಂದರೆ ಇದ್ದಲ್ಲಿ ಟ್ರೂನ್ಯಾಟ್‌ ಮೂಲಕ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಬೇಕು. ಐಎಲ್‌ಐ ಪ್ರಕರಣಗಳಲ್ಲೂ ತಕ್ಷಣ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸುವ ಜೊತೆಗೆ ಆನ್‌ಲೈನ್‌ ನೋಂದಣಿ ಮತ್ತು ಆಪ್‌ಲೋಡ್‌ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯ ಆಯುರ್ವೇದ, ಯೂನಾನಿ, ಹೋಮಿಯೋಪತಿ ವೈದ್ಯರ ಬಳಿ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಬಂದ ತಕ್ಷಣ ಮೇಲಿನ ಮೊಬೈಲ್‌ ಸಂಖ್ಯೆಗೆ ಮಾಹಿತಿ ನೀಡಬೇಕು. ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸೂಕ್ತ ರೀತಿಯಲ್ಲಿ ನೆರವಾಗಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿ ನಿರ್ಲಕ್ಷ್ಯ ಮತ್ತು ಲೋಪ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕೆಪಿಎಂಎ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತೀವ್ರ ಉಸಿರಾಟ ತೊಂದರೆ ಪ್ರಕರಣಗಳು ದೃಢಪಟ್ಟಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ವ್ಯವಸ್ಥಿತ ನಿಗಾದಲ್ಲಿ ಚಿಕಿತ್ಸೆ ನಡೆಯಬೇಕು. ಐಸಿಯುಗಳಲ್ಲಿರುವ ರೋಗಿಗಳ ಆರೋಗ್ಯ ಲಕ್ಷಣ, ಏರುಪೇರು ನಿಗಾಕ್ಕೆ ನಿರಂತರ ಪರಿಶೀಲನೆಗಾಗಿ ಶುಶ್ರುಶಕಿಯರನ್ನು ನಿಯೋಜಿಸಬೇಕು. ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕರು ಸೂಕ್ತ ಗಮನ ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇಂತಹ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಲ್ಯಾಬ್‌ ಟೆಕ್ನಿಷಿಯನ್‌ಗಳನ್ನು ಮತ್ತು ನೋಡಲ್‌ ಅಧಿಕಾರಿಗಳನ್ನು ನೀಯೋಜಿಸಬೇಕು. ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಎಲ್ಲರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

ಜಿಲ್ಲೆಯಲ್ಲಿ ಐಎಲ್‌ಐ ಹಂತದಲ್ಲಿಯೇ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಇವರೊಂದಿಗೆ ಸಂಪರ್ಕ ಗುರುತಿಸುವ ಕಾರ್ಯ ಸಹ ಅಚ್ಚುಕಟ್ಟಾಗಿ ನಡೆಯಬೇಕು. ಅದರಂತೆ ಐಎಲ್‌ಐ ಮತ್ತು ಸಾರಿ ಪ್ರಕರಣಗಳಿಗೆ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಮತ್ತು ಹೋಮ್‌ಕ್ವಾರಂಟೈನ್‌ ತೀವ್ರ ನಿಗಾ ಇಡುವ ಬಗ್ಗೆಯೂ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಈ ಕರ್ತವ್ಯಕ್ಕೆ ನೇಮಿಸಿರುವ ಎಲ್ಲ ನೋಡಲ್‌ ಅಧಿಕಾರಿಗಳು, ಲ್ಯಾಬ್‌ ಟೆಕ್ನಿಷಿಯನ್‌ಗಳು, ತಾಲೂಕಾವಾರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಐಎಂಎ ಮತ್ತು ಕಂಟೈನ್ಮೆಂಟ್‌ ವಲಯಗಳ ವೈದ್ಯರು ರೋಗಿಗಳು ಬಂದ ತಕ್ಷಣ ನಿರ್ಲಕ್ಷ್ಯ ಮಾಡದೇ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಡಾ| ಔದ್ರಾಮ್‌, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿ ಧಿ ಡಾ| ಮುಕುಂದ ಗಲಗಲಿ, ಡಾ| ಎಂ.ಬಿ. ಬಿರಾದಾರ, ಸಂಪತ್‌ಕುಮಾರ ಗುಣಾರೆ, ಶರಣಪ್ಪ ಕಟ್ಟಿ, ಡಾ| ಕವಿತಾ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next