Advertisement

ಬಾಳಿಗೆ ಬೆಳಕಾಗಲಿ ಹೊಸ ವರ್ಷ

12:00 PM Jan 02, 2020 | Naveen |

ವಿಜಯಪುರ: ಹೊಸ ವರ್ಷದ ಹರುಷ ಮಕ್ಕಳ ಜೀವನದಲ್ಲಿ ಬೆಳಕಾಗಲಿ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಲ ಮಂದಿರದ ಮಕ್ಕಳು ಹೊರಹೊಮ್ಮಬೇಕು ಎಂದು ಬಾಲ ಮಂದಿರದ ಮಕ್ಕಳಿಗೆ ಕಿವಿಮಾತು ಹೇಳುವ ಮೂಲಕ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಭಾವುಕರಾದರು.

Advertisement

ಬುಧವಾರ ನಗರದ ಸರಕಾರಿ ಕಿರಿಯ ಬಾಲಕರ ಬಾಲಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾಯೋಜನೆ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಸುಧಾರಣಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಂಪ್ಯೂಟರ್‌ ಲ್ಯಾಬ್‌, ಗ್ರಂಥಾಲಯ ಉದ್ಘಾಟನೆ ಹಾಗೂ ಕೆಕ್‌ ಕತ್ತರಿಸುವ ಮೂಲಕ 2020ರ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿರುವ ನಮ್ಮ ನೆಲ ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸಿಕೊಡುವುದು. ಗುರು-ಹಿರಿಯರಿಗೆ ನಮಸ್ಕರಿಸುವುದರಿಂದ ಆರೋಗ್ಯ, ಆಯುಷ್ಯದ ಜತೆಗೆ ಯಶಸ್ಸು ಕೂಡ ಲಭಿಸುತ್ತದೆ. ಇದೊಂದು ಅತ್ಯಂತ ಹೃದಯ ಸ್ಪರ್ಶಿ ಕಾರ್ಯಕ್ರಮ ಆಗಿದೆ ಎಂದು ಭಾವುಕರಾದರು.

ಬದುಕಿನಲ್ಲಿ ವೈಯಕ್ತಿಕವಾಗಿ ಅನುಭವಿಸಿದ ಕಷ್ಟಗಳಿಂದ ಒಬ್ಬ ಮನುಷ್ಯ ಸಾಧನೆ ಮಾಡಿದ್ದಾನೆಎನ್ನುವುದಕ್ಕಿಂತಲೂ ಹಿರಿಯರ, ತಂದೆ ತಾಯಿಗಳ ಪುಣ್ಯದ ಫಲದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ.ಅದರಂತೆ ಪ್ರತಿಯೊಬ್ಬರು ಜೀವನದಲ್ಲಿ ನಮಗಿಂತ ಮೇಲಿನವರನ್ನು ನೋಡಿ ಬದುಕು ಸಾಗಿಸುವ ಬದಲು ನಮಗಿಂತ ಕೆಳಗಿನವರನ್ನು ನೋಡಿ ಜೀವನ ಕಲಿಯಬೇಕು. ಜೊತೆಗೆ ನಾವು ಬೆಳೆದು ಬಂದ ದಾರಿಯನ್ನು ಸಿಂಹಾಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯಪುರ ಮೂಲದ ನೆದರಲ್ಯಾಂಡ್‌ ಅವಿನಾಸಿ ಭಾರತೀಯ ರಾಜಶೇಖರ ಸುರಗಿಹಳ್ಳಿ ಮಾತನಾಡಿ, ಇಲ್ಲಿನ ಬಾಲಕರ ಬಾಲಮಂದಿರದ ಮಕ್ಕಳ ಶಿಸ್ತು, ಸಂಯಮ, ಭಾರತೀಯ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಂಡು ಬೆರಗಾಗಿದ್ದೇನೆ. ನಮ್ಮ ಮಕ್ಕಳಿಗೆ ಇಲ್ಲಿನ ಮಕ್ಕಳ ಸದ್ಗುಣಗಳ ಆದರ್ಶನ ಜೀವನ ಮೌಲ್ಯಗಳ ದರ್ಶನ ಮಾಡಿಸುವ ಉದ್ದೇಶದಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ಸರಕಾರಿ ಕಿರಿಯ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿದ್ದಾಗಿ ವಿವರಿಸಿದರು.

Advertisement

ಅಮ್ಮನ ಮಡಿಲು ಚಾರಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಪ್ರತಿಯೊಬ್ಬರಿಗೂ ಎಷ್ಟೇ ಶ್ರೀಮಂತಿಕೆ ಇದ್ದರೂ ನೋವು-ನಲಿವು ಹಂಚಿಕೊಳ್ಳಲು ತಂದೆ ಅಪ್ಪುಗೆ ಮತ್ತು ತಾಯಿ ಮಡಿಲು ಇರಬೇಕು. ಇವರೆಡು ಇಲ್ಲದವರ ಬದುಕಿನ ದುಃಖದ ಬವಣೆಯ ಅನುಭವ ತೋಡಿಕೊಳ್ಳುತ್ತ ಭಾವುಕರಾಗಿ ಮೌನಕ್ಕೆ ಜಾರಿದರು.

ಜಾತಿ ಬೇಧ ಮಾಡದೆ ಎಲ್ಲರೊಂದಿಗೆ ಪ್ರೀತಿಯಿಂದ ಬಾಳಬೇಕು. ಸತತ ಅಭ್ಯಾಸದಿಂದ ಉನ್ನತ ಹುದ್ದೆಯನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದ ಅವರು, ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಮಾತನಾಡಿ, ಬಾಲ ಮಂದಿರದ ಮಕ್ಕಳಿಗೆ ಸರಕಾರದಿಂದ ಎಲ್ಲ ಸೌಲಭ್ಯಗಳು ನೀಡುವುದರ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ, ಅವರ ಜೀವನ ರಕ್ಷಣೆ ಕೂಡಾ ಮಾಡುತ್ತಿದೆ. ಸ್ವಂತ ಮಕ್ಕಳಂತೆ ಇಲ್ಲಿನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ. ಬಾಲಮಂದಿರದಲ್ಲಿ ಬೆಳೆದ ಮಕ್ಕಳು ಇಂದು ಉನ್ನತ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು
ಹೆಮ್ಮೆ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಾಲಕರ ಬಾಲಮಂದಿರದ ಅನಾಥ ಮಕ್ಕಳ ಏಳ್ಗೆಗೆ ಸಹಾಯ ಸಹಕಾರ ನೀಡಿದ ದಾನಿಗಳನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಅಧ್ಯಕ್ಷ ಶ್ರೀಧರ ಕುಲಕರ್ಣಿ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಿಳಾ ಮತು ಮಕ್ಕಳ ಇಲಾಖೆಯ ಕೆ.ಕೆ. ಚವ್ಹಾಣ, ಬಾಲಕಿಯರ ಬಾಲಮಂದಿರದ ಅ ಧೀಕ್ಷಕಿ ದೀಪಾಕ್ಷಿ ಜಾನಕಿ, ತನಿಖಾ ಸಮಿತಿ ಸದಸ್ಯ ಪೀಟರ್‌ ಅಲೆಕ್ಸಾಂಡರ್‌, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ರುದ್ರಾಂಬಿಕೆ ಬಿರಾದಾರ, ದಾನೇಶ ಅವಟಿ ಇದ್ದರು.

ಬಸವರಾಜ ಜಗಳೂರು ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ಸರಸ್ವತಿ ಮತ್ತು ರೇಷ್ಮಾ ಪ್ರಾರ್ಥಿಸಿದರು. ಮೌನೇಶ ಪೋದ್ದಾರ ನಿರೂಪಿಸಿದರು. ಗುರುರಾಜ ಇಟಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.