Advertisement

ನೀರಾವರಿ ಯೋಜನೆಯಲ್ಲಿ ನೂತನ ಪ್ರಯೋಗ

11:27 AM Jun 10, 2019 | Naveen |

ವಿಜಯಪುರ: ರಾಜ್ಯದ ಮಾತ್ರವಲ್ಲ ದೇಶದ ನೀರಾವರಿ ಯೋಜನೆಯಲ್ಲೇ ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ತಿಡಗುಂದಿ ವಿಸ್ತರಣಾ ನೀರಾವರಿ ಯೋಜನೆ ಅತ್ಯಂತ ವಿಶಿಷ್ಟ ಹಾಗೂ ವಿನೂತನ ಎನಿಸಿದೆ. 64 ಕಿ.ಮೀ. ಉದ್ದವಿರುವ ಈ ಕಾಲುವೆ ಜಾಲ 36 ವಿತರಣಾ ಕಾಲುವೆ ಹೊಂದಿರುವ ಸದರಿ ಯೋಜನೆಯಲ್ಲಿ 25 ಸಾವಿರ ಹೆಕ್ಟೇರ್‌ ಪ್ರದೇಶದ ನೀರಾವರಿ ಸೌಲಭ್ಯ ಹೊಂದಲಿದೆ.

Advertisement

ಇದೆಲ್ಲಕ್ಕೂ ವಿಶೇಷವಾಗಿ ಸದರಿ ಜಲ ಮೇಲ್ಸೇತುವೆ ನಗರ ಹೊರ ಭಾಗದಲ್ಲಿ ನಿರ್ಮಾಗೊಳ್ಳುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಮಾರ್ಗದ ಮೇಲೆ ಜಲ ಮೇಲ್ಸೇತುವೆ ನಿಮಾಣಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದು ಅತ್ಯಂತ ಮುದ ನೀಡುವ ವೀಕ್ಷಣಾ ಪ್ರದೇಶವಾಗಲಿದೆ.

ಇನ್ನೂ ವಿಶೇಷ ಎಂದರೆ ಸದರೆ ಜಲ ಮೇಲ್ಸೇತುವೆ ಮೇಲ್ಭಾಗದಲ್ಲಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸುತ್ತಿರುವುದು. ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಕನಸು ಕಂಡಿರುವ ಸಿದ್ದೇಶ್ವರ ಶ್ರೀಗಳ ಸಲಹೆ ಮೇರೆಗೆ ಮೇಲ್ಸೇತುವೆ ಮೇಲೆ ವಾಯು ವಿಹಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಾಯು ವಿಹಾರ ಮಾಡುತ್ತಲೇ ವಿಜಯಪುರ ಹೊರ ಹೊಲದ ಮೇಲ್ಭಾಗದಿಂದ ಐತಿಹಾಸಿಕ ಗುಮ್ಮಟ ನಗರಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಸಹಕಾರಿ ಆಗಲಿದೆ. ಇದಕ್ಕಾಗಿ ಜಲ ಮೇಲ್ಸೇತುವೆ ಮೇಲೆ ಈಗಾಗಲೇ ಕಾಂಕ್ರಿಟ್ ರೂಫ‌ ಹಾಕಿದ್ದು, ಎರಡು ಬದಿಯಲ್ಲಿ ಕಬ್ಬಿಣದ ಸರಳುಗಳನ್ನು ನಿರ್ಮಿಸುವ ಕೆಲಸ ಭರದಿಂದ ಸಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಸಮಾರಂಭದಲ್ಲಿ ಮುಳವಾಡ ನೀರಾವರಿ ಯೋಜನೆ ಅಡಿಯಲ್ಲಿ ತಾವು ರೂಪಿಸಿದ್ದ ತಿಡಗುಂದಿ ವಿಸ್ತರಣಾ ಯೋಜನೆ ಸಾಕಾರಗೊಳ್ಳುತ್ತಿರುವುದಕ್ಕೆ ಸಚಿವ ಎಂ.ಬಿ. ಪಾಟೀಲ ಅವರಿಗೆ ಇದೀಗ ಸಂತ್ರಪ್ತ ಭಾವ ಮೂಡಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅವರು ಗೃಹ ಖಾತೆ ನಿಭಾಯಿಸುತ್ತಿದ್ದರೂ ತಮ್ಮ ಮಹತ್ವಾಕಾಂಕ್ಷೆಯ ಅಪರೂಪದ ತಂತ್ರಜ್ಞಾನದ ತಿಡಗುಂದಿ ವಿಸ್ತರಣಾ ಯೋಜನೆ ಕುರಿತು ಅವರಿಗೆ ಮಮಕಾರ ಹೆಚ್ಚು. ಇದೇ ಕಾರಣಕ್ಕೆ ಅವರು ಅನ್ಯ ಖಾತೆಯ ಸಚಿವರಾಗಿದ್ದರೂ ತವರು ಜಿಲ್ಲೆಯಲ್ಲಿ ತಮ್ಮಿಂದಲೇ ರೂಪುಗೊಂಡು, ಕಾಮಗಾರಿಗೆ ಚಾಲನೆ ಪಡೆದಿದ್ದ ಯೋಜನೆ ಸ್ಥಿತಿ ಅರಿಯಲು ಮುಂದಾಗಿದ್ದಾರೆ.

ಬುರಣಾಪುರ ಬಳಿ ನಿರ್ಮಾಣಗೊಳ್ಳುತ್ತಿರುವ ಜಲ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಭಾನುವಾರ ಪತ್ರಕರ್ತರ ತಂಡದೊಂದಿಗೆ ಭೇಟಿ ನೀಡಿದ ಅವರು, ಮ್ಯಾನ್‌ ಲಿಫ್ಟರ್‌ ಮೂಲಕ ಜಲ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿದರು. ಜಲ ಮೇಲ್ಸೇತುವೆ ಭವಿಷ್ಯದಲ್ಲಿ ಹೊರ ಜನರಿಗೆ ಮತ್ತೂಂದು ಪ್ರವಾಸಿ ತಾಣ ಹಾಗೂ ಸ್ಥಳೀಯರಿಗೆ ಪಿಕ್‌ನಿಕ್‌ ಸ್ಪಾಟ್ ಅಗುವ ಸಾಧ್ಯತೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದರು.

Advertisement

ಮೆಟ್ರೋ ಮೊದಲಾದ ಬೃಹತ್‌ ಕಾಮಗಾರಿಗಳಲ್ಲಿ ಮಾತ್ರ ಬಳಕೆಯಾಗುವ ಪ್ರೀ ಕಾಸ್ಟ್‌-ಪ್ರೀ ಟೆನಷನ್‌ ತಂತ್ರಜ್ಞಾನ ತಿಡಗುಂದಿ ನೀರಾವರಿ ಯೋಜನೆಯಲ್ಲಿ ಬಳಕೆಯಾಗುತ್ತಿದೆ. ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಯಲ್ಲಿ ಬಳಕೆಯಾಗಿರುವ ಈ ತಾಂತ್ರಿಕತೆ ದೇಶದಲ್ಲೇ ಮೊದಲನೆಯದ್ದು ಎಂದು ವಿವರಿಸಿದರು.

ಸದರಿ ಯೋಜನೆಯಲ್ಲಿ 18 ಮೀ., 21 ಮೀ., 24 ಮೀ, 27 ಮೀ. ಹಾಗೂ 30 ಮೀ. ಉದ್ದ ಚತುರ್ಭುಜಾಕಾರದ ಟ್ರಫ್‌ಗಳನ್ನು ಬಳಸಲಾಗುತ್ತಿದೆ. ತಿಡುಗಂದಿ ಶಾಖಾ ಕಾಲುವೆಯು 17.43 ಕಿ.ಮೀ.ನಿಂದ 40 ಕಿ.ಮೀ.ವರೆಗೆ ಕಾಮಗಾರಿ ಮುಗಿದಿದೆ. 56ರಿಂದ 76ನೇ ಕಿ.ಮೀ.ವರೆಗೆಗಿನ ಪಂಕ್ತೀಕರಣದ ಟೋ´ೋಗ್ರಫಿ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಳ್ಳುತ್ತಲೇ ತಿಡಗುಂದಿ ಶಾಖಾ ಕಾಲುವೆ 17 ಕಿ.ಮೀ. ನಂತರ ಬರಟಗಿ, ಮಖಣಾಪುರ, ಅರಕೇರಿ ಭಾಗದ ಹಳ್ಳಗಳಿಗೆ ನೀರು ಹರಿಸಿ ಬಾಂದಾರು ಹಾಗೂ ಸಣ್ಣ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next