ವಿಜಯಪುರ: ಜಿಲ್ಲೆಯಲ್ಲಿ ಕೃಷ್ಣಾ ನದಿಯ ಮುಳವಾಡ ಏತ ನೀರಾವರಿ ಕಾಲುವೆಯ ಮೇಲೆ ಮತ್ತೊಂದು ಕ್ರಾಸಿಂಗ್ ಬಳಸಿ ನಿರ್ಮಿಸಿರುವ ವಿಶಿಷ್ಟ ವಿನ್ಯಾಸದ ಕಾಲುವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತಿದೆ. ತಾಂತ್ರಿಕ ದೃಷ್ಟಿಯಿಂದ ಕಾಲುವೆ ನಿರ್ಮಾಣ ವಿನ್ಯಾಸ ದಾಖಲೆ ಎನಿಸಿದ್ದು, ಈ ಕಾರ್ಯದಿಂದ ನಾಗಠಾಣ ಶಾಖಾ ಕಾಲುವೆಯಡಿ ಸಿಂದಗಿ ತಾಲೂಕಿನ ಮೂರು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮಸೂತಿ ಜಾಕ್‌ವೆಲ್ ವೈ ಜಂಕ್ಷನ್‌ನಿಂದ ಆರಂಭಗೊಳ್ಳುವ ವಿಜಯಪುರ ಮುಖ್ಯ ಕಾಲುವೆ ದೇವರಹಿಪ್ಪರಗಿ ಹತ್ತಿರದ ಜಾಲವಾದ ಗ್ರಾಮದಲ್ಲಿ 123.8 ಕಿ.ಮೀ.ನಲ್ಲಿ ಚಿಮ್ಮಲಗಿ ಏತ ನೀರಾವರಿ ಮುಖ್ಯ ಕಾಲುವೆ ಸಂಪರ್ಕಿಸುತ್ತದೆ. ಮುದ್ದೇಬಿಹಾಳ ತಾಲೂಕು ಚಿಮ್ಮಲಗಿ ಏತನೀರಾವರಿ ಹುಲ್ಲೂರು ಜಾಕ್‌ವೆಲ್ನಿಂದ ಆರಂಭಗೊಳ್ಳುವ ಚಿಮ್ಮಲಗಿ ಮುಖ್ಯಕಾಲುವೆ 124.9 ಕಿ.ಮೀ.ನಲ್ಲಿ ಮುಳವಾಡ ಕಾಲುವೆ ಕೆಳಭಾಗದಲ್ಲಿ ಹರಿಯುತ್ತದೆ.
ಮುಳವಾಡ ಏತ ನೀರಾವರಿ ಅಡಿಯಲ್ಲಿ ವಿಜಯಪುರ ಮುಖ್ಯಕಾಲುವೆಯಡಿ ನೀರು ಹರಿಸಲಾಗುತ್ತಿದೆ. ಆದರೆ ಚಿಮ್ಮಲಗಿ ಕಾಲುವೆಯಲ್ಲಿ 110 ಕಿ.ಮೀ. ಬಳಗಾನೂರನಲ್ಲಿ ರೈತರ ತಕರಾರಿನಿಂದ ಕಾಲುವೆ ಅಗೆತ ಸ್ಥಗಿತಗೊಂಡಿದೆ. ಎರಡು ತಿಂಗಳ ಹಿಂದೆ ಅಧಿಕಾರಿಗಳೊಂದಿಗೆ ಸ್ವತಃ ನಾನು ರೈತನ ಜಮೀನಿಗೆ ತೆರಳಿ ನಿಮಗೆ ಪರಿಹಾರ ಕೊಡಿಸುವ ಜವಾಬ್ದಾರಿ ನನ್ನದು, ನಿನ್ನ ಮಗನಿಗೆ ನಮ್ಮ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ನೌಕರಿಯನ್ನೂ ನೀಡುತ್ತೇನೆ. ಕಾಲುವೆ ಕಾಮಗಾರಿ ಅಡ್ಡಿ ಪಡಿಸದೆ ನೀರು ಹರಿಸಲು ಸಹಕರಿಸಿ ಎಂದು ವಿನಂತಿಸಿದಾಗ ಒಪ್ಪಿಗೆ ನೀಡಿದ್ದ ರೈತರು ಇದೀಗ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.
ಹೀಗಾಗಿ ಪರ್ಯಾಯ ಮಾರ್ಗವಾಗಿ ವಿಜಯಪುರ ಮುಖ್ಯಕಾಲುವೆ ಹಾಗೂ ಚಿಮ್ಮಲಗಿ ಕಾಲುವೆ ಕ್ರಾಸಿಂಗ್‌ನಲ್ಲಿ ವಿಜಯಪುರ ಕಾಲುವೆಗೆ 1.2 ಮೀ. ಕಾಂಕ್ರೀಟ್ ಪೈಪ್ ಅಳವಡಿಸಿ ಇಂದಿನಿಂದ ಚಿಮ್ಮಲಗಿ ಕಾಲುವೆಗೆ 1.5 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಅಲ್ಲಿಂದ ಚಿಮ್ಮಲಗಿ ಕಾಲುವೆ ವೈ ಜಂಕÏನ್ ಮೂಲಕ ನಾಗಠಾಣ ಶಾಖಾ ಕಾಲುವೆ ಮೂಲಕ ಬೊಮ್ಮನಜೋಗಿ, ಕಡ್ಲೆವಾಡ, ಮುಳಸಾವಳಗಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಾಲುವೆ ಮೇಲೆ ಕಾಲುವೆ ನಿರ್ಮಾಣಗೊಂಡಿದ್ದು ವಿಶೇಷ. ಇದೇ ಮೊದಲ ಬಾರಿಗೆ ಮೇಲಿನ ಕಾಲುವೆಯಿಂದ ಕೆಳಗಿನ ಕಾಲುವೆಗೆ ಕಾಂಕ್ರೀಟ್ ತೂತು ಹಾಕಿ ಪೈಪ್ ಅಳವಡಿಸಿ, ನೀರು ಹರಿಸಿರುವುದು ರೈತರ ಖುಷಿ ಇಮ್ಮಡಿಗೊಳಿಸಿದೆ.