ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಗುಲಾಲು ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಾರಂಭಗೊಂಡು ಕೇವಲ 30 ನಿಮಿಷದಲ್ಲಿ ಅಭ್ಯರ್ಥಿಗಳ ಮತಗಳ ಪ್ರಮಾಣದ ಚಿತ್ರಣ ಹೊರಬಿದ್ದಿತು. ಆಯ್ಕೆಗೊಂಡ ಅಭ್ಯರ್ಥಿಗಳ ಬೆಂಬಲಿಗರು ಅಭ್ಯರ್ಥಿಯನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜೈಕಾರ ಹಾಕಿ ಸಂಭ್ರಮಿಸಿದರು.
ಪಕ್ಷಗಳ ಅಭ್ಯರ್ಥಿಗಳಿಗಿಂತ ಪಕ್ಷೇತರರೇ ಹೆಚ್ಚು ಆಯ್ಕೆಗೊಂಡಿದ್ದರಿಂದ ಪಕ್ಷಗಳ ಧ್ವಜಗಳು ಕೆಲ ವಾರ್ಡಗಳಲ್ಲಿ ಮಾತ್ರ ಕಂಡು ಬಂದವು. ಪಕ್ಷೇತರರು ತಮ್ಮ ತಮ್ಮ ವಾರ್ಡಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಸಿಹಿ ಹಂಚಿದರು. ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲುವಾಗಲೆಂದು ಹರಕೆ ಹೊತ್ತಿದ್ದ ಕೆಲವು ಬೆಂಬಲಿಗರು ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ತಾಳಿಕೋಟೆ ಪುರಸಭೆ ಇತಿಹಾಸದಲ್ಲಿ ಇಲ್ಲಿವರೆಗೂ ಪಕ್ಷೇತರರಿಗೆ ಮತದಾರರು ಹೆಚ್ಚು ಗೆಲ್ಲಿಸುತ್ತ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮೂವರು ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್ ಮಟ್ಟದಲ್ಲಿಯೂ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಾಗುವದು.
•
ಎಸ್.ಎನ್. ಪಾಟೀಲ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ತಾಳಿಕೋಟೆ ಪುರಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಜಯ ಕಂಡಿದ್ದೇವೆ. ಜಾತಿ ಆಧಾರದ ಮೇಲೆ ಮತ ಗಳಿಕೆಗಾಗಿ ಕೆಲವರು ಟಿಕೆಟ್ ಪಡೆದುಕೊಳ್ಳದೇ ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್ ಮಟ್ಟದಲ್ಲೂ ಪಕ್ಷ ಬಲಗೊಳಿಸುತ್ತೇವೆ.
•
ರಾಘವೇಂದ್ರ ಚವ್ಹಾಣ
ಬಿಜೆಪಿ ತಾಲೂಕಾಧ್ಯಕ್ಷ