Advertisement

ಗೃಹ ನಿರ್ಬಂಧಿಗಳ ಮೇಲೆ ನಿಗಾ

12:40 PM Mar 21, 2020 | Naveen |

ವಿಜಯಪುರ: ದೇಶದಲ್ಲಿ ಕೊರೊನಾ ಹೋಂಕ್ವಾರಂಟೈನ್‌ನಲ್ಲಿ ಇರುವರು ಮನೆಯಿಂದ ಹೊರ ಹೋಗಿರುವ ಪ್ರಕರಣಗಳು ದೇಶದ ವಿವಿಧ ಕಡೆಗಳಿಂದ ವರದಿಯಾಗಿದೆ. ರೋಗದ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಕಟ್ಟುನಿಟ್ಟನ ಕ್ರಮಗಳನ್ನು ಕೈಗೊಂಡಿದ್ದು ಗೃಹ ನಿರ್ಬಂಧ (ಹೋಂಕ್ವಾರಂಟೈನ್‌)ದಲ್ಲಿರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಲು ನೆರೆ ಹೊರೆಯವರ ಕಣ್ಗಾವಲು ಇರಿಸಲು ನಿರ್ಣಯ ಕೈಗೊಂಡಿದೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಕೊರೊನಾ ರೋಗ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಇಂದಿನಿಂದಲೇ ಹೋಂಕ್ವಾರಂಟೈನ್‌ ನಿಗಾದಲ್ಲಿರುವ ವ್ಯಕ್ತಿಗಳು ಮನೆಯಿಂದ ಹೊರ ಹೋಗದಂತೆ ತೀವ್ರ ನಿಗಾ ಇಡುವ ಜೊತೆಗೆ ಅವರ ಬಗ್ಗೆ ಮಾಹಿತಿ ಒದಗಿಸಲು ಕೋರಲಾಗುತ್ತಿದೆ. ಹಾಗಂತ ಪಕ್ಕದ ಮನೆಯವರ ಮಧ್ಯೆ ಅಪಾರ್ಥ ಕಲ್ಪಿಸುವ ಉದ್ದೇಶ ಇದಲ್ಲ. ರೋಗ ಹರಡುವ ಅಪಾಯ ತಪ್ಪಿಸಲು ಇಂಥ ನಿರ್ಧಾರಕ್ಕೆ ಬರಲಾಗಿದೆ. ನೆರೆಹೊರೆಯವರು ನೀಡಿದ ಮಾಹಿತಿ ಗೌಪ್ಯವಾಗಿ ಇಡುವುದಾಗಿಯೂ ಹೇಳಿದರು.

ಜಿಲ್ಲೆಗೆ ವಿದೇಶದಿಂದ ಈವರೆಗೆ 266 ಜನ ಬಂದಿದ್ದು 11 ಜನ 28 ದಿನಗಳ ಹಾಗೂ 90 ಜನ 14 ದಿನದ ಹೋಂಕ್ವಾರಂಟೈನ್‌ ಪೂರ್ಣಗೊಂಡಿದೆ. 165 ಜನ ಹೋಂಕ್ವಾರಂಟೈನ್‌ದಲ್ಲಿದ್ದು ಇತರೆ ಐದು ಜನರ ಮೇಲೂ ನಿಗಾ ಇಡಲಾಗಿದೆ. ವಿವಿಧ ಕಡೆಗಳಲ್ಲಿ ಹೋಂಕ್ವಾರಂಟೈನ್‌ನಲ್ಲಿ ಇರುವವರು ಕಣ್ತಪ್ಪಿಸಿ ಮನೆಯಿಂದ ಹೊರ ಹೋಗಿ ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದರಿಂದ ಆಗಬಹುದಾದ ಸಂಭವನೀಯ ಅಪಾಯ ತಪ್ಪಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಇದು ಗೃಹ ಬಂಧನವಲ್ಲ, ಆರೋಗ್ಯದ ತುರ್ತು ಅವಶ್ಯಕತೆ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಮುನ್ನೆಚ್ಚರಿಕೆಗಾಗಿ ಈಗಾಗಲೇ ಮಹಾರಾಷ್ಟ್ರ ರಾಜ್ಯದೊಂದಿಗೆ ಸಾರಿಗೆ ಸಂಪರ್ಕ ಕಡಿತ ಮಾಡಲಾಗಿದೆ. ಕಲಬುರಗಿ ಜಿಲ್ಲೆಯೊಂದಿಗೆ ಇಂದು ಸಂಜೆಯಿಂದ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಲ್ಲದೇ ಸಾರ್ವಜನಿಕರು ಸಹ ತುರ್ತು ಸಂದರ್ಭ ಹೊರತುಪಡಿಸಿ ಪ್ರಯಾಣಿಸದಂತೆಯೂ ಮನವಿ ಮಾಡಲಾಗಿದೆ ಎಂದರು.

Advertisement

ಕೊರೊನಾ ಬರುವ ಎರಡು ವಾರಗಳಲ್ಲಿ ರುದ್ರನರ್ತನ ಪ್ರದರ್ಶಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಾರಣ ಕೊರೊನಾ ರೋಗದ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಇಂದಿನಿಂದ ಬ್ಯೂಟಿಪಾರ್ಲರ್‌, ಹೇರ್‌ ಸಲೂನ್‌ (ಕ್ಷೌರ ಅಂಗಡಿ) ಸಂಪೂರ್ಣ ಬಂದ್‌ ಮಾಡಲು ಆದೇಶ ನೀಡಲಾಗುತ್ತದೆ ಎಂದರು.

ಜಿಲ್ಲೆಯಾದ್ಯಂತ ತುರ್ತು ಕೆಲಸ ಹೊರತುಪಡಿಸಿ ಗುಂಪು ಗುಂಪಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲಾಗಿದೆ. ಅತ್ಯಂತ ತುರ್ತು ಕೆಲಸವಿರುವ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರೇ ನಿರ್ಣಯಿಸಲಿದ್ದಾರೆ.

ಜಿಲ್ಲೆಯಲ್ಲಿ ರೋಗದ ಪರಿಸ್ಥಿತಿ ದುರ್ಲಾಭ ಪಡೆಯದಂತೆ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮಾರುಕಟ್ಟೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡುವುದು, ನಿಗದಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಜಪ್ತಿ ಮಾಡಲಾಗುತ್ತದೆ. ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂಗಡಿ ಮತ್ತು ಹೋಲ್‌ಸೇಲ್‌ ಮಾರಾಟ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾ. 22ರಂದು ಜನತಾ ಕರ್ಫ್ಯೂ ಕರೆ ನೀಡಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಎಡಿಸಿ ಡಾ| ಔದ್ರಾಮ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಈ.ಕ.ರ. ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ. ಗಂಗಾಧರ, ವಿಶ್ವ ಆರೋಗ್ಯ ಸಂಸ್ಥೆ ನಿಯಂತ್ರಣಾಧಿಕಾರಿ ಡಾ| ಮುಕುಂದ ಗಲಗಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next