Advertisement

ಮಂಗಳೂರು-ವಿಜಯಪುರ ರೈಲು ಯಾನ ಹೇಗಿದೆ?

01:04 PM Nov 28, 2019 | Naveen |

ಮಂಗಳೂರು: ಮಂಗಳೂರು ಜಂಕ್ಷನ್‌-ವಿಜಯಪುರ ನಡುವೆ ಆರಂಭಗೊಂಡಿರುವ ಮೊದಲ ರೈಲು ಯಾನಕ್ಕೆ ಸಾಮಾನ್ಯ ದರ್ಜೆ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Advertisement

ಸದ್ಯ ಈ ರೈಲಿಗೆ ತಲಾ ಒಂದು ಎಸಿ ಟು-ಟೈರ್‌ ಮತ್ತು ಎಸಿ ತ್ರಿ ಟೈರ್‌, ಆರು ದ್ವಿತೀಯ ದರ್ಜೆ ಸ್ಲೀಪರ್‌ ಮತ್ತು ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿ ಅಳವಡಿಸಲಾಗಿದೆ. ಎಸಿ ಟು-ಟೈರ್‌ ಮತ್ತು ತ್ರಿಟೈರ್‌ಗೆ ಹೆಚ್ಚಿನ ಸ್ಪಂದನೆ ಕಂಡು ಬಂದಿಲ್ಲ. ದ್ವಿತೀಯ ದರ್ಜೆ ಸ್ಲೀಪರ್‌ ಬೋಗಿಗಳಿಗೆ ಸಾಮಾನ್ಯ ಸ್ಪಂದನೆಯಿದ್ದು, ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಆದರೆ ಸಾಮಾನ್ಯ ದರ್ಜೆಯ ನಾಲ್ಕು ಬೋಗಿಗಳು ಭರ್ತಿಯಾಗಿ ಸಂಚರಿಸುತ್ತಿವೆ.

ಕಡಿಮೆ ಟಿಕೆಟ್‌ ದರ: ಮಂಗಳೂರು-ವಿಜಯಪುರ ನಡುವೆ ಎಸಿ ಟು-ಟೈರ್‌ಗೆ 2,045 ರೂ., ಎಸಿ ತ್ರಿಟೈರ್‌ಗೆ 1,450 ರೂ., ದ್ವಿತೀಯ ದರ್ಜೆ ಸ್ಲೀಪರ್‌ಗೆ 530 ರೂ.
ಮತ್ತು ಸಾಮಾನ್ಯಕ್ಕೆ 214 ರೂ. ದರ ಇದೆ. ದ್ವಿತೀಯ ದರ್ಜೆ ಸ್ಲೀಪರ್‌ ಮತ್ತು ಸಾಮಾನ್ಯ ದರ್ಜೆ ದರಗಳು ಬಸ್‌ ದರಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ. ಬಸ್‌ ದರ 800ರಿಂದ 1,000ರೂ. ವರೆಗೆ ಇರುತ್ತದೆ.

ಪೂರಕ ಪ್ರಯತ್ನ ಅಗತ್ಯ: ಉತ್ತರ ಕರ್ನಾಟಕದಿಂದ ಕರಾವಳಿಗೆ ಶಿಕ್ಷಣ, ವ್ಯವಹಾರ, ಉದ್ಯೋಗ, ಚಿಕಿತ್ಸೆ ನಿಮಿತ್ತ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಜನರು ಆಗಮಿಸುತ್ತಾರೆ. ಸಾಮಾನ್ಯ ಜನತೆ ಹೆಚ್ಚಾಗಿ ಜನರಲ್‌ ಅಥವಾ ದ್ವಿತೀಯ ದರ್ಜೆ ಸ್ಲೀಪರ್‌ ಬೋಗಿ ಆಯ್ದುಕೊಳ್ಳುತ್ತಾರೆ. ಆದುದರಿಂದ ಜನರಲ್‌ ಬೋಗಿಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಚಿವ ಸುರೇಶ್‌ ಅಂಗಡಿ ಪ್ರಯತ್ನದಿಂದ ತಾತ್ಕಾಲಿಕ ನೆಲೆಯಲ್ಲಿ ನ.11ರಿಂದ ಫೆ.11ರವರೆಗೆ ಮೂರು ತಿಂಗಳ ಅವಧಿಗೆ ಪ್ರಾರಂಭಿಸಲಾಗಿದೆ. ಇದನ್ನು ಕಾಯಂಗೊಳಿಸಲು ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಬೇಕಿದ್ದರೆ ತಾತ್ಕಾಲಿಕ ಸಂಚಾರ ಅವಧಿಯಲ್ಲಿ ಉತ್ತಮ ನಿರ್ವಹಣೆ, ಲಾಭ ದಾಖಲಾಗಿರಬೇಕು. ರೈಲು ಪ್ರಸ್ತುತ ಮಂಗಳೂರು ಜಂಕ್ಷನ್‌ವರೆಗೆ ಸಂಚರಿಸುತ್ತಿದ್ದು, ಇದನ್ನು ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಬೇಕು, ಜತೆಗೆ ಸಮಯದಲ್ಲೂ ಬದಲಾವಣೆ ಮಾಡಬೇಕು ಎಂಬ ಬೇಡಿಕೆಯಿದೆ.

ಪ್ರಸ್ತುತ ರೈಲು ಸಂಜೆ 6.40 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 12.30ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ ತಲುಪುತ್ತದೆ. ಇದರ ಬದಲು ಮಧ್ಯಾಹ್ನ ಒಂದು ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬಂದು, ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪುವಂತೆ ಮತ್ತು ಮಂಗಳೂರಿನಿಂದ ಸಂಜೆ 4.30ರ ಬದಲು ರಾತ್ರಿ 7 ಗಂಟೆಗೆ ಹೊರಟು ಮರುದಿನ 8 ಗಂಟೆಗೆ ಹುಬ್ಬಳ್ಳಿ ತಲುಪುವಂತೆ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಕರಾವಳಿ ರೈಲ್ವೆ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ.

Advertisement

ವಿಜಯಪುರ-ಮಂಗಳೂರು ರೈಲು ಸಂಚಾರದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿಯ ಜನರಿಗೆ ಅನುಕೂಲವಾಗಿದೆ. ನಾಲ್ಕು ಜನರಲ್‌ ಬೋಗಿಗಳು ಭರ್ತಿಯಾಗಿ ಸಾಗುತ್ತಿದ್ದು, ಹೆಚ್ಚಿನ ಬೋಗಿಗಳಿಗೆ ಬೇಡಿಕೆಯಿದೆ. ಆದುದರಿಂದ ಹೆಚ್ಚುವರಿಯಾಗಿ ನಾಲ್ಕು ಜನರಲ್‌ ಬೋಗಿ ಜೋಡಿಸುವಂತೆ ಸಚಿವ ಸುರೇಶ ಅಂಗಡಿ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ.
ಕುತ್ಬುದ್ದೀನ್‌ ಖಾಜಿ,
ಅಧ್ಯಕ್ಷರು, ರೈಲ್ವೆ ಅಭಿವೃದ್ಧಿ ಹೋರಾಟ
ಸಮಿತಿ-ಹುಬ್ಬಳ್ಳಿ

ಮಂಗಳೂರು ಜಂಕ್ಷನ್‌ -ವಿಜಯಪುರ ರೈಲನ್ನು ನಿರಂತರ ಓಡಿಸುವ ಕುರಿತು 2 ತಿಂಗಳು ನಂತರ ನಿರ್ಧರಿಸಲಾಗುವುದು. ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಸೇವೆ ಪಡೆದು ರೈಲು ಪಾಪ್ಯುಲರ್‌ ಆಗುವ ಸಾಧ್ಯತೆ ಇದೆ.
ಇ.ವಿಜಯಾ, ನೈರುತ್ಯ ರೈಲ್ವೆ ಮುಖ್ಯ
ಸಾರ್ವಜನಿಕ ಸಂಪರ್ಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next