ವಿಜಯಪುರ: ಕೋವಿಡ್-19 ಕೋವಿಡ್ ಸೋಂಕು ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ರವಿವಾರ ವಿಧಿಸಿದ್ದ ಕರ್ಫ್ಯೂ ವಿಜಯಪುರ ನಗರ ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ತಬ್ಧಗೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗಿದೆ.
ಮಾರ್ಚ 22 ರಂದು ಜನತಾ ಕರ್ಫ್ಯೂ ನಂತರ ಎರಡು ತಿಂಗಳ ಬಳಿಕ ಸರ್ಕಾರ ರಾಜ್ಯದಾದ್ಯಂತ ಘೋಷಿಸಿದ ವಾರದ ಕೊನೆ ದಿನ ಕರ್ಫ್ಯೂ ಆದೇಶಕ್ಕೆ ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ರಂಜಾನ್ ಹಬ್ಬಕ್ಕೆ ಮುನ್ನಾ ದಿನವೇ ಘೋಷಿತವಾದ ಕರ್ಫ್ಯೂಗೆ ವಿಜಯಪುರ ಜಿಲ್ಲೆಯಲ್ಲಿ ಸೂಕ್ತ ಸ್ಪಂದನೆ ಸಿಕ್ಕಿದೆ. ಬೆಳಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳು ಜನ ಸಂಚಾರ ಇಲ್ಲದೇ ಬಿಕೋ ಎನ್ನತೊಡಗಿತ್ತು. ಅಲ್ಲಲ್ಲಿ ಕೆಲವರು ತುರ್ತು ಕೆಲಸಗಳಿಗೆ ಬೈಕ್, ಲಘು ವಾಹನಗಳ ಓಡಾಟ ಕಂಡು ಬಂದರೂ ಪೊಲೀಸರ ಎಚ್ಚರಿಕೆ ಕಾರಣ ಅನಗತ್ಯ ರಸ್ತೆಗೆ ಇಳಿಯುವವರೂ ಕಾಣಿಸಿಕೊಳ್ಳಲಿಲ್ಲ.
ಕರ್ಫ್ಯೂ ರವಿವಾರ ಇದ್ದ ಕಾರಣ ಸರ್ಕಾರಿ ಕಚೇರಿಗಳಿಗೂ ಸಹಜವಾಗಿ ರಜೆ ಇದ್ದು, ಸರ್ಕಾರಿ ಸೇವೆಯ ಕರ್ತವ್ಯಕ್ಕೆ ತೆರಳುವವರೂ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ವಾರದಿಂದ ಬಸ್ ಸಂಚಾರ ಆರಂಭಗೊಂಡು ಮತ್ತೆ ತನ್ನ ವೈಭವ ಕಂಡುಕೊಂಡಿದ್ದ ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳು ಮತ್ತೆ ಸ್ತಬ್ಧಗೊಂಡಿದ್ದವು. ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಮಹಾತ್ಮಾ ಗಾಂಧೀಜಿ ವೃತ್ತದ ಸುತ್ತಲ ಪ್ರದೇಶಗಳಾದ ಲಾಲ್ ಬಹದ್ದೂರ ಶಾಸ್ತ್ರಿ ಮಾರುಕಟ್ಟೆ, ಕಿತ್ತೂರ ರಾಣಿ ಚನ್ನಮ್ಮ ಮಾರುಕಟ್ಟೆ, ನೆಹರು ಮಾರುಕಟ್ಟೆ, ಶ್ರೀ ಸಿದ್ಧೇಶ್ವರ ದೇವಸ್ಥಾನ ರಸ್ತೆ, ಕಿರಾಣಿ ಬಜಾರ್ ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು ಶನಿವಾರ ಸಂಜೆ 7 ರಿಂದಲೇ ಬಾಗಿಲು ಹಾಕಿದ್ದರಿಂದ ರವಿವಾರ ಮಾರುಕಟ್ಟೆ ಪ್ರದೇಶ ಸಂಪೂರ್ಣ ಬಿಕೋ ಎನ್ನುತ್ತಿತ್ತು.
ಜನತಾ ಕರ್ಫ್ಯೂ ಬಳಿಕ ಕೋವಿಡ್ ಸೋಂಕಿನ ವೇಗ ನಿಗ್ರಹಕ್ಕೆ ಕೇಂದ್ರ ಸರ್ಕಾರ ಸರಾಸರಿ ಒಂದೂವರೆ ತಿಂಗಳು ಘೋಷಿಸಿದ್ದ ಲಾಕ್‌ಡೌನ್‌ನಿಂದಲೂ ವಿಜಯಪುರ ಜಿಲ್ಲೆ ಸ್ತಬ್ಧವಾಗಿತ್ತು. ಸರಕು ವಾಹನಗಳ ಹೊರತಾಗಿ ಸಾರಿಗೆ ಸಂಸ್ಥೆಯ ಬಸ್, ನಗರ ಸಾರಿಗೆ, ಆಟೋ ಸೇರಿದಂತೆ ಎಲ್ಲ ರೀತಿಯ ಜನಸಾರಿಗೆಯೂ ನಿಷೇಧಿಸಲ್ಪಟ್ಟಿತ್ತು. ರವಿವಾರದ ಕರ್ಫ್ಯೂ ಸಂದರ್ಭದಲ್ಲಿ ಕೂಡ ರಸ್ತೆಗಳು ಮತ್ತೆ ಸಂಪೂರ್ಣ ಸ್ತಬ್ಧವಾಗಿ, ನಿರ್ಜನವಾಗಿದ್ದವು. ಕರ್ಫ್ಯೂ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿದ್ದವು. ಮತ್ತೊಂದೆಡೆ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಸಂಚಾರ ಬಂದ್ ಮಾಡಿದ್ದರು. ವೈದ್ಯರು ಸೇರಿದಂತೆ ಕೋವಿಡ್ ವಾರಿಯರ್‌ಗಳು ಹಾಗೂ ತುರ್ತು ಸೇವೆಗೆ ತೆರಳುವವರು ಗುರುತಿನ ಪತ್ರ ಪರಿಶೀಲನೆ ಬಳಿಕ ಅನುಮತಿಸಲಾಗುತ್ತಿತ್ತು.