ವಿಜಯಪುರ: ಪ್ರಸಕ್ತ ಸಾಲಿನ ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಫೆಬ್ರುವರಿ ತಿಂಗಳಾಂತ್ಯಕ್ಕೆ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎನ್‌ಎಬಿಎಚ್ ಮಾನ್ಯತೆ ಪಡೆದ 800 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗಳಲ್ಲಿ ಕನಿಷ್ಠ ಶೇ. 75 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಎಸ್‌ಇಪಿ-ಟಿಎಸ್‌ಪಿ ಕಾರ್ಯಕ್ರಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ಆಯೋಜನೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ತರಬೇತಿ ನೀಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳ ಯಶಸ್ವಿಗೆ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲಿ ಈ ತಿಂಗಳ 27ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲು ಚಿಂತನೆ ಹೊಂದಿದ್ದರೂ ಈ ಕುರಿತು ಅಧಿಕೃತ ದಿನಾಂಕ ನಂತರ ಪ್ರಕಟಿಸಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉದ್ಯೋಗ ಮೇಳದ ಜಿಲ್ಲಾ ಆಯ್ಕೆ ಸಮಿತಿ ರಚಿಸಲಾಗಿದೆ. ಜಿಪಂ ಸಿಇಒ ಉಪಾಧ್ಯಕ್ಷರಾಗಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು, ವೈದ್ಯಕೀಯ ಅ ಧೀಕ್ಷಕರು ಸದಸ್ಯರಾಗಿರುತ್ತಾರೆ.
ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತಂತೆ ಮಾರ್ಗಸೂಚಿ ಅನ್ವಯ ಮಂಡಿಸುವಂತೆ ಸೂಚಿಸಿದರು. ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡು ಜಿಲ್ಲಾಮಟ್ಟದ ಯುವ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕು. ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳಿಗೆ ಉಪಾಹಾರದ ವ್ಯವಸ್ಥೆ, ನೋಂದಣಿ ಮಾಡಿಕೊಳ್ಳಲು ಅಗತ್ಯ ಕೌಂಟರ್ ತೆರೆದು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ ಮಾತನಾಡಿ, ಪ.ಜಾ. 140 ಹಾಗೂ ಪ.ಪಂ. 70 ಅಭ್ಯರ್ಥಿಗಳ ಆಯ್ಕೆ ಉದ್ದೇಶ ಹೊಂದಿದೆ. ಈ ಉದ್ಯೋಗ ಮೇಳಕ್ಕೆ ಮೂರು ಪ್ರತಿಷ್ಠಿತ ಎನ್‌ಎಬಿಎಚ್ ಮಾನ್ಯತೆ ಪಡೆದ ಆಸ್ಪತ್ರೆಗಳಾದ ಅಪೋಲೊ ಮೆಡ್‌ಸ್ಕಿಲ್ಸ್, ಎಂ.ಎಸ್. ರಾಮಯ್ಯ, ನಾರಾಯಣ ಹೃದಯಾಲಯ ಆಸ್ಪತ್ರೆಗಳು ಭಾಗಿಯಾಗಲಿದೆ ಎಂದರು.
ವಿವಿಧ ಜಿಲ್ಲೆಯ ಉಪ ವಿಭಾಗಿಯ ಆಸ್ಪತ್ರೆಗಳಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ 9 ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ. ಉದ್ಯೋಗ ಮೇಳದಲ್ಲಿ ಪಿಯುಸಿ ವಿಜ್ಞಾನ, ಪದವಿ, ಡಿಪ್ಲೋಮಾ ನರ್ಸಿಂಗ್, ಬಿಎಸ್‌ಸಿ ನರ್ಸಿಂಗ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಪಡೆದ ಅಭ್ಯರ್ಥಿಗಳು (ಎ.ಎನ್.ಎಂ) ಸೇರಿದಂತೆ ವಿವಿಧ ವಿಧ್ಯಾರ್ಹತೆ ಹೊಂದಿದ 18 ರಿಂದ 35 ವಯಸ್ಸಿನವರು ಪಾಲ್ಗೊಳ್ಳಲು ಅರ್ಹರು ಎಂದರು.
ಮಹಿಳೆಯರಿಗೆ ಪ್ರತಿ ಕೌಶಲ್ಯದಲ್ಲಿ ಶೇ. 50 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳು ಬರದಿದ್ದ ಸಂದರ್ಭದಲ್ಲಿ ಪುರುಷ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಉದ್ಯೋಗ ಮೇಳಕ್ಕೆ ಆಗಮಿಸುವವರು ಆರೋಗ್ಯ ಶಿಕ್ಷಣ ಅ ಧಿಕಾರಿ ಹೊಸಮನಿ ಇವರನ್ನು ಮೊ.
9448873843 ಗೆ ಸಂಪರ್ಕಿಸಬಹುದು ಎಂದರು. ಸಭೆಯಲ್ಲಿ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ| ಶರಣಪ್ಪ ಕಟ್ಟಿ ಸೇರಿದಂತೆ ಇತರರು ಇದ್ದರು.