ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತ ನೀರಾವರಿ ಯೋಜನೆಯಲ್ಲಿ ಏಷ್ಯಾದಲ್ಲಿಯೇ ಮೊಲದ ಬಾರಿಗೆ ಜಲ ಮೇಲ್ಸೇತುವೆ (ವೈಯಾಡಕ್ಟ್) ಮೂಲಕ ನಿರ್ಮಿಸಲಾಗುತ್ತಿದೆ. ಸದರಿ ತಂತ್ರಜ್ಷಾನ ಬಳಸಿರುವ ತಿಡಗುಂದಿ ವಿಸ್ತರಣಾ ಯೋಜನೆಯ ಕಾಲುವೆ ಕಾಮಗಾರಿ ಬರುವ ನೂರು ದಿನಗಳಲ್ಲಿ ಸಂಪೂರ್ಣಗೊಂಡು, ಸೆ. 15ರಂದು ಲೋಕಾರ್ಪಣೆ ಆಗಲಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ರವಿವಾರ ತಿಡಗುಂದಿ ನೀರಾವರಿ ವಿಸ್ತರಣಾ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವೈಯಾಡಕ್ಟ್ ತಂತ್ರಜ್ಞಾನದ ಮೂಲಕ ಅತಿ ಉದ್ದ ಹಾಗೂ ಎತ್ತರದ ಜಲ ಮೇಲ್ಸೇತುವೆ ಮೂಲಕ ನೀರಾವರಿ ಕಲ್ಪಿಸಿರುವುದು ಏಷ್ಯಾದಲ್ಲಿಯೇ ನಮ್ಮಲ್ಲೇ ಮೊದಲು. 2017 ಸ್ವಾತಂತ್ರ್ಯೋತ್ಸವ ದಿನದಂದು ಅಡಿಗಲ್ಲು ಹಾಕಿದ್ದ ಸದರಿ ಯೋಜನೆ ಪೂರ್ಣಗೊಳಿಸಲು 18 ತಿಂಗಳ ಕಾಲಮಿತಿ ನೀಡಲಾಗಿತ್ತು. ರೈಲ್ವೇ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಭಾರಿ ವಿದ್ಯುತ್ ಮಾರ್ಗಗಳ ಮೇಲೆ ಜಲ ಮೇಲ್ಸೇತುವೆ ನಿರ್ಮಿಸಬೇಕಿದ್ದು, ಆಯಾ ಇಲಾಖಾ ಸಮ್ಮತಿ ಬೇಕಿದೆ. ಇದಲ್ಲದೇ ಓರ್ವ ರೈತನ ತಕರಾರು ಇದ್ದು, ಈ ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಸೆ. 15ರಂದು ಎಂಜಿನಿಯರ್ ದಿನಾಚರಣೆ ದಿನವೇ ವಿಶಿಷ್ಟ ತಾಂತ್ರಿಕತೆ ಈ ಯೋಜನೆ ಲೋಕಾರ್ಪಣೆ ಆಗಲಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ಗಣ್ಯರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ರಾಜ್ಯದ ಪಾಲಿನ ನೀರು ಬಳಕೆಗೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ಎಲ್ಲ ಪ್ರಕ್ತಿಯೆ ಮುಗಿಯದ ಹೊರತು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಎತ್ತರವನ್ನು 519 ರಿಂದ 524 ಮೀ.ವರೆಗೆ ಗೇಟ್ ಅಳವಡಿಕೆ ಅಸಾಧ್ಯ. ಗೇಟ್ ಅಳವಡಿಸದ ಹೊರತು ನಮ್ಮ ಪಾಲಿನ ನೀರನ್ನು ನೇರವಾರಿ ನೀರಾವರಿಗೆ ಬಳಕೆ ಅಸಾಧ್ಯ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ಇನ್ನೂ ಒಂದು ದಶಕ ಬೇಕು. ಹೀಗಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ರೂಪಿಸಿದ ಯೋಜನೆಯನ್ನು ಈಗಾಗಲೇ ಅನುಷ್ಠಾನ ಮಾಡಿದ್ದು, ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿದೆ ಎಂದರು.
ನಮ್ಮ ಪಾಲಿನ ನೀರನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳಲು ಇದೀಗ ಹಳ್ಳಗಳಿಗೆ ನೀರು ಹರಿಸುವುದು, ಬಾಂದಾರು ಭರ್ತಿ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿರುವ ದೊಡ್ಡ ಪ್ರಮಾಣದ ಸುಮಾರು 30 ಹಳ್ಳಗಳನ್ನು ಗುರುತಿಸಿ ನೀರು ಹರಿಸಲು ಯೋಜಿಸಲಾಗುತ್ತಿದೆ. ಹೀಗೆ ಹರಿಯುವ ಹಳ್ಳಗಳ ನೀರನ್ನು ಬಾಂದಾರ್ ನಿರ್ಮಿಸಿ, ನಿಲ್ಲಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ನೀರನ್ನು ಈಗಾಗಲೇ ನಿರ್ಮಾಣಗೊಂಡಿರುವ ಬಾಂದಾರು, ಅಯಾ ಭಾಗದ ಸಣ್ಣ ಕೆರೆಗಳಿಗೆ ತುಂಬಿಸಿಕೊಳ್ಳುವ ಯೋಜನೆಯೂ ಇದರಲ್ಲಿದೆ. ಇದರಿಂದ ಪ್ರತಿ ಹಳ್ಳದ ವ್ಯಾಪ್ತಿಯ 10-12 ಹಳ್ಳಿಗಳ ಜನರಿಗೆ ಉಪಯೋಗವಾಗಲಿದೆ ಎಂದರು.
ಹಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿ ಆಗಲಿದೆ. ಸದರಿ ಯೋಜನೆ ರೂಪುಗೊಂಡರೇ ನೀರಾವರಿ ಯೋಜನೆ ಸೌಲಭ್ಯ ವಂಚಿತ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಹಾಗೂ ಹಳ್ಳಗಳ ಆಧಾರಿತ ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ವಿವರಿಸಿದರು.
ಈ ಕುರಿತು ಈಗಾಗಲೇ ಜಿಲ್ಲೆಯ ಪರಿಣಿತರೊಂದಿಗೆ ಚರ್ಚಿಸಲಾಗಿದ್ದು, ಜಿಲ್ಲೆಯಲ್ಲಿರುವ ದೊಡ್ಡ ಹಳ್ಳಗಳು, ಸಣ್ಣ-ಸಣ್ಣ ಕೆರೆಗಳಿಗೆ ನೀರು ಹರಿಸಲು ಇರುವ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಸಹಿತ ವರದಿ ರೂಪಿಸಲಾಗುತ್ತಿದೆ. ಸದರಿ ಯೋಜನೆಯ ಅನುಷ್ಠಾನದಿಂದ ರಾಜ್ಯದ ಪಾಲಿನ ನೀರಿನ ಬಳಕೆ ಹಾಗೂ ಜಿಲ್ಲೆಯ ಅನ್ನದಾತರಿಗೆ ಆಗುವ ಪ್ರಯೋಜನಗಳ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರೊಂದಿಗೆ ಜಿಲ್ಲೆಯ ಎಲ್ಲ ಸಚಿವ ಶಾಸಕರ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತದೆ ಎಂದರು.
ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ, ಮೇಯರ್ ಶ್ರೀದೇವಿ ಲೋಗಾವಿ, ಉಪ ಮೇಯರ್ ಗೋಪಾಲ ಘಟಕಾಂಬಳೆ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೊಡ, ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್, ಡಾ| ಸುನೀತಾ ಚವ್ಹಾಣ, ಅಬ್ದುಲ್ ಹಮೀದ್ ಮುಶ್ರೀಫ್, ಸಿದ್ಧಣ್ಣ ಸಕ್ರಿ, ಶರಣಪ್ಪ ಯಕ್ಕುಂಡಿ, ಡಾ| ಗಂಗಾಧರ ಸಂಬಣ್ಣಿ ಇದ್ದರು.