Advertisement

ನಾಲೆಯಿಂದ ಅಕ್ರಮ ನೀರು: ಶಾಸಕರಿಂದ ತರಾಟೆ

11:56 AM May 22, 2020 | Naveen |

ವಿಜಯಪುರ: ಮುಳವಾಡ ಏತನೀರಾವರಿ ಯೋಜನೆಗಳ ಕಾಲುವೆ ಮೇಲ್ಭಾಗದಲ್ಲಿ ಜಲ ನಿರ್ವಹಣೆ ಇಲ್ಲದೇ ಕೊನೆ ಭಾಗಕ್ಕೆ ನೀರು ಹರಿಯದ ವಿಷಯ ತಿಳಿದ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಕಾಲುವೆಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿ, ಅಕ್ರಮ ನೀರು ಬಳಕೆ ಮಾಡುವುದನ್ನು ಕಂಡು ಕಿಡಿಕಾರಿದ ಘಟನೆ ಜರುಗಿದೆ.

Advertisement

ಗುರುವಾರ ಮುಳವಾಡ ಏತನೀರಾವರಿ ಯೋಜನೆಯ 118 ಕಿ.ಮೀ. ಉದ್ದದ ಮಲಘಾಣ ಪಶ್ಚಿಮ ಕಾಲುವೆ ಮಸೂತಿಯಿಂದ ತೊದಲಬಾಗಿ ಗಡಿವರೆಗಿನ ಕಾಲುವೆಯಲ್ಲಿ 100ನೇ ಕಿ.ಮೀ. ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುತ್ತದೆ. ಕಾಲುವೆಗೆ ನೀರು ಹರಿಸಿ ತಿಂಗಳಾದರೂ ಕೊನೆ ಭಾಗದ ಅರ್ಜುಣಗಿ, ಹೆಬ್ಟಾಳಟ್ಟಿ ಪ್ರದೇಶಗಳಿಗೆ ಇನ್ನೂ ನೀರು ತಲುಪದ ವಿಷಯ ತಿಳಿದ ಅವರು, ಗ್ರಾಮಸ್ಥರ ಕೋರಿಕೆ ಮೇರೆಗೆ ನಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಹಂತದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಯುವಂತೆ ನಿರ್ವಹಣೆ ಮಾಡುವ ಸೂಚನೆ ಪಾಲಿಸದ ಅಧಿಕಾರಿಗಳ ವಿರುದ್ಧವೂ ಹರಿಹಾಯ್ದ ಅವರು, ತಿಂಗಳಾದರೂ ನಾಲೆಗೆ ಹರಿಯುತ್ತಿರುವ ನೀರು 70ನೇ ಕಿ.ಮೀ ದಾಟಿ ನೀರು ಮುಂದೆ ಹೋಗುತ್ತಿರಲಿಲ್ಲ. ಕಾರಣ ಶೇಗುಣಶಿ, ಕಂಬಾಗಿ ಮತ್ತು ಸಂಗಾಪುರ ಎಸ್‌.ಎಚ್‌ ಗ್ರಾಮಗಳ ನಈರಾವರಿ ಸೌಲಭ್ಯದ ವ್ಯಾಪ್ತಿಯಲ್ಲಿ ಇಲ್ಲದ ಮೇಲ್ಭಾಗದ ರೈತರು ಅಕ್ರಮವಾಗಿ ಸೈಪಾನ್‌ ಮೂಲಕ ಭಾರಿ ಪ್ರಮಾಣದಲ್ಲಿ ನೀರು ಪಡೆಯುತ್ತಿರುವುದೇ ಸಮಸ್ಯೆಗೆ ಮೂಲ ಕಾರಣ ಎಂಬುದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಗಮನಕ್ಕೆ ಬಂತು.

ಅಧಿಕಾರಿಗಳು ರೈತರಿಗೆ ಹಲವು ಬಾರಿ ಮನವಿ ಮಾಡಿದರೂ ರೈತರು ಅಕ್ರಮವಾಗಿ ನೀರು ಪಡೆಯುವ ಸಂಪರ್ಕಗಳನ್ನು ಕಡಿತಗೊಳಿಸಿರಲಿಲ್ಲ. ಇದರಿಂದ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಅಸಹಾಯಕರಾಗಿ ಎಂ.ಬಿ. ಪಾಟೀಲ ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ಶಾಸಕ ಎಂ.ಬಿ. ಪಾಟೀಲ ಅವರೇ ಖುದ್ದಾಗಿ ಅಕ್ರಮವಾಗಿ ನೀರು ಪಡೆಯುವ ಕಾಲುವೆಗಳ ಮೇಲೆ ಸಂಚರಿ ಅಕ್ರಮ ನೀರು ಪಡೆಯುವ ರೈತರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಅಕ್ರಮ ನೀರು ಪಡೆಯುವ ಎಲ್ಲ ಅಕ್ರಮ ಸಂಪರ್ಕಗಳು ಬಂದ್‌ ಮಾಡಬೇಕು. ಇಲ್ಲವಾದದಲ್ಲಿ ಶುಕ್ರವಾರದಿಂದ ಅಕ್ರಮ ನೀರು ಪಡೆಯುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಅಧಿಕಾರಿಗಳು ಹಿಂಜರಿಕೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ರೈತರಲ್ಲಿ ಎಲ್ಲರಿಗೂ ಹಂಚಿ ನ್ಯಾಯ ಸಮ್ಮತ ಜೀವನ ನಡೆಸುವ ಮನೋಭಾವ ಇರಬೇಕು. ಅತಿಯಾದ ಅಸೆಯಿಂದ ಅಕ್ರಮವಾಗಿ ನೀರು ಪಡೆಯುವ ಹುನ್ನಾರ ಕೈಬಿಡಬೇಕು. ಮುಖ್ಯ ಕಾಲುವೆ, ಉಪಕಾಲುವೆ, ಹಳ್ಳ-ಕೊಳ್ಳ, ನಾಲಾಗಳ ಮೂಲಕ ನೀರು ಹರಿಸಿದಾಗಲೂ ಅಕ್ರಮವಾಗಿ ನೀರು ಬಳಸುವ ಕ್ರಮ ಸರಿಯಲ್ಲ ಎಂದು ಹರಿಹಾಯ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next