ವಿಜಯಪುರ: ಹೋಳಿ ಹಬ್ಬವನ್ನು ಜಿಲ್ಲೆಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ನಗರಕ್ಕೆ ಅನತಿ ದೂರದಲ್ಲಿರುವ ಮಹಲ್ -ಐನಾಪುರ ತಾಂಡಾದಲ್ಲಿ ಹೋಳಿ ಹುಣ್ಣಿಮೆ ನಂತರ ಜನಿಸುವ ಗಂಡು ಮಕ್ಕಳ ನಾಮಕರಣ ಮಾಡಬೇಕಿದ್ದರೆ ಮತ್ತೂಂದು ಹೋಳಿ ಹುಣ್ಣಿಮೆಯೇ ಬರಬೇಕು. ಅಲ್ಲಿವರೆಗೆ ಗಂಡು ಮಕ್ಕಳಿಗೆ ನಾಮಕರಣ ಮಾಡುವಂತಿಲ್ಲ.
ಇದು ಈ ತಾಂಡಾದಲ್ಲಿ ನಡೆದುಕೊಂಡು ವಿಶಿಷ್ಟ-ವಿಭಿನ್ನ ಆಚರಣೆ. ಹೋಳಿ ಹಬ್ಬದ ದಿನ ಎಷ್ಟೇ ದೂರದಲ್ಲಿದ್ದರೂ ಈ ತಾಂಡಾದ ಗಂಡು ಮಗುವಿನ ಪಾಲಕರು ನಾಮಕರಣಕ್ಕಾಗಿ ಊರಿಗೆ ಬರಲೇಬೇಕು. ಹೋಳಿ ದಿನ ನಾಮಕರಣ ಮಾಡಲಾಗುವ ಗಂಡು ಮಗುವಿನ ತಲೆಗೆ ಕೆಂಪು ಬಟ್ಟೆ ಪೇಟಾ ಸುತ್ತುವ ಮೂಲಕ ಈ ಮನೆಯಲ್ಲಿ ನಾಮಕರಣ ಇದೆ ಎಂಬ ಮಾಹಿತಿ ದೃಢೀಕರಿಸಲಾಗುತ್ತದೆ.
ಹೋಳಿ ಹುಣ್ಣಿಮೆ ದಿನ ಗಂಡು ಮಗುವಿಗೆ ನಾಮಕರಣ ಮಾಡಿದರೆ ಮನ್ಮಥನಂಥ ಸೌಂದರ್ಯ ಹಾಗೂ ಪ್ರಖರ ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆಂಬ ನಂಬಿಕೆಯೇ ಈ ಸಂಪ್ರದಾಯ ಆಚರಣೆಗೆ ಕಾರಣ. ನಾಮಕರಣಕ್ಕೆ ಮುನ್ನ ತಂಡಾದ ಪ್ರಮುಖನಾದ ನಾಯಕನ ಒಪ್ಪಿಗೆ ಪಡೆದು ಮನೆ ಮುಂದೆ ಕಂಬಳಿಯಿಂದ ಚಪ್ಪರ ಹಾಕಿ, ಸಂಜೆ ಮಹಿಳೆಯರು ಸಾಮೂಹಿಕವಾಗಿ ಮನೆ ಮುಂದೆ ಸಾಂಪ್ರದಾಯಿಕ ಉಡುಗೆ ತೊಟ್ಟು ಜಾನಪದ ಹಾಡು ಹಾಡುತ್ತ ನೃತ್ಯ ಮಾಡುತ್ತಾರೆ. ನಂತರ ನಾಯಕ, ಕಾರಭಾರಿ ಬಂದು ಮನೆ ಮುಂದಿನ ಕಂಬಳಿ ಚಪ್ಪರದಲ್ಲಿ ಕೋಲಿನಿಂದ ಬಡಿಯುತ್ತ ನಾಮಕರಣದ ಗೀತೆಗಳನ್ನು ಹಾಡಿ ನಾಮಕರಣ ಶಾಸ್ತ್ರ ಮುಗಿಸುತ್ತಾರೆ. ಬಳಿಕ ನೆರೆದವರಿಗೆ ಪೂರಿ ವಿತರಿಸಲಾಗುತ್ತದೆ.
ಹೋಳಿ ಹುಣ್ಣಿಮೆ ದಿನ ಬೆಳಗ್ಗೆ ಪುರುಷರಿಂದ ಸಾಮೂಹಿಕ ಕಾಮದಹನ ನಡೆದರೆ, ಸಂಜೆ ಮಹಿಳೆಯರು ಕಾಮದಹನ ನಡೆಸುತ್ತಾರೆ. ಹೋಳಿ ಬೆಂಕಿ ಹೊತ್ತಿಸಿದ ನಂತರ ತಾಂಡಾದ ಪಂಚರಿಂದ ನೇಮಕಗೊಂಡ ಇಬ್ಬರು ಅವಿವಾಹಿತ ಯುವಕರು ತಲೆಗೆ ಗಾಂಧಿ ಟೋಪಿ, ಹಿಂಭಾಗದಲ್ಲಿ ಕೆಂಪು ಪಟ್ಟಿ ಕಟ್ಟಿಕೊಂಡಿರುತ್ತಾರೆ. ಈ ಯುವಕರು ಕೈಯಲ್ಲಿ ಔಡಲ ಸಸಿ ಹಿಡಿದು ಧೋತರ ಉಟ್ಟು ಬಾವಿಗೆ ಹೋಗಿ ನೀರು ತಂದು ಬೆಂಕಿಗೆ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಮಹಿಳೆಯರು ಹೊಸ ವರ್ಷದಲ್ಲಿ ಬೆಳೆದ ಜೋಳದ ಕಾಳುಗಳನ್ನು ಬೆಂಕಿಗೆ ಎರಚಿ, ಅದರ ಬೂದಿಯನ್ನು ಮನೆಗೆ ತಂದು ಪೂಜಿಸುತ್ತಾರೆ.
ಜಿ.ಎಸ್. ಕಮತರ