ವಿಜಯಪುರ: ಜಿಲ್ಲೆಯ ರಾಜಕೀಯ ಸಜ್ಜನಿಕೆಯಲ್ಲಿ ಮೇರು ಸ್ಥಾನ ಪಡೆದಿದ್ದ ಮಾಜಿ ಶಾಸಕ ಎನ್.ಎಸ್.ಖೇಡ (72) ನಿಧರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯ ಕಾಣಿಸಿದ್ದರಿಂದ ವಿಜಯಪುರ ನಗರದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಇಂದು ನಿಧನರಾಗಿದ್ದಾರೆ. ಸ್ವಗ್ರಾಮ ಸಾವಳಸಂಗ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭೆ ಕ್ಷೇತ್ರದಿಂದ 1983-84 ಅವಧಿಯಲ್ಲಿ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದ ಖೇಡ್ ಅವರು, ಸರಳ, ಸಜ್ಜನಿಕೆಯ ವ್ಯಕ್ತಿತ್ವದ ರಾಜಕೀಯಕ್ಕೆ ಆದರ್ಶವಾಗಿದ್ದರು. ರಾಜಕೀಯ ಕಲುಷಿತ ಸ್ಥಿತಿ ಆರಂಭಗೊಳ್ಳುತ್ತಲೇ ಸಕ್ರೀಯ ರಾಜಕೀಯದಿಂದ ದೂರ ಸರಿದಿದ್ದರು. ಆದರೆ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರೀಯ, ಕ್ರಿಯಾಶೀಲರಾಗಿದ್ದ ಖೇಡ, ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ:‘ಕೆಎಸ್ಆರ್ ಟಿಸಿ’ ಪದ ಬಳಕೆ ವಿಚಾರ; ಕರ್ನಾಟಕ- ಕೇರಳ ಸಾರಿಗೆಯಲ್ಲಿ ಪೈಪೋಟಿ ಏನಿಲ್ಲ: ಸವದಿ
ಬರ ಪೀಡಿತ, ಮಳೆ ಆಶ್ರಿತ ಈ ಪ್ರದೇಶದಲ್ಲಿ ಜಲ ಸಂರಕ್ಷಣೆ ಜಾಗೃತಿಗಾಗಿ ಜಲಸಾಕ್ಷರ ಅಭಿಯಾನದಲ್ಲಿ ರಾಜೇಂದ್ರ ಸಿಂಗ್ ಅವರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಬೃಹತ್ ಸಮೇಶ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಜಯಪುರ ಜಿಲ್ಲೆಯ ಮಟ್ಟಿಗೆ ಖೇಡ ಸಾವಕಾರ ಎಂದೇ ಜನಪ್ರೀಯತೆ ಗಳಿಸಿದ್ದರು. ಕಿರಿಯರನ್ನು ಪ್ರೀತಿ, ವಾತ್ಸಲ್ಯದಿಂದ ಮಾತನಾಡಿಸುವ, ಅಭಿಮಾನದಿಂದ ಕಾಣುವ ಸರಳ ಗುಣ ಹೊಂದಿದ್ದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿ ಬಳಗ ಅಗಲಿದ್ಧಾರೆ.
ಸಂತಾಪ : ಮಾಜಿ ಶಾಸಕ ಖೇಡ ಅವರ ನಿಧನಕ್ಕೆ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ್, ಕೃಷ್ಣಾ ಕಾಡಾ ಸಮಿತಿ ಸದಸ್ಯ ರವಿ ಖಾನಾಪುರ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.