Advertisement

ಇಂಡಿಗೆ ಸುಸಜ್ಜಿತ ಮೀನು ಮಾರುಕಟ್ಟೆ

04:09 PM Oct 26, 2019 | Naveen |

„ಜಿ.ಎಸ್‌.ಕಮತರ
ವಿಜಯಪುರ: ಕಳೆದ ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲೆಯಲ್ಲಿ ಆಧುನಿಕ ಸೌಲಭ್ಯಗಳ ಸುಸಜ್ಜಿತ ಮೀನು ಮಾರಾಟ ಘಟಕ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಮತ್ತೂಂದೆಡೆ ಜಿಲ್ಲೆಯ ಇಂಡಿ ತಾಲೂಕು ಕೇಂದ್ರದಲ್ಲಿ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಮೀಸಲಿರಿಸಿದ್ದು, 1 ಕೋಟಿ ರೂ. ವೆಚ್ಚದ ಈ ಸೌಲಭ್ಯಕ್ಕೆ ನವೆಂಬರ್‌ ಮೊದಲ ವಾರ ಅಡಿಗಲ್ಲು ಹಾಕುವ ಸಾಧ್ಯತೆ ಇದೆ.

Advertisement

ಕರ್ನಾಟಕ ಮೀನು ಅಭಿವೃದ್ಧಿ ನಿಗಮದಿಂದ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 4 ತಾಲೂಕುಗಳಿಗೆ ಈ ಸೌಲಭ್ಯ ದೊರಕಿದ್ದು, ಹಲವೆಡೆ ಯೋಜನೆಗೆ ಚಾಲನೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು, ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಯಾದಗಿರಿ ಜಿಲ್ಲೆಯ ಯಾದಗಿರಿ ಹಾಗೂ ಉಡುಪಿ ಜಿಲ್ಲೆಯ ಶಾಂತಾರು ಹಾಗೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಕೇಂದ್ರದಲ್ಲಿ ಆಧುನಿಕ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ತಲಾ 1 ಕೋಟಿ ರೂ. ವೆಚ್ಚದ ಯೋಜನೆಗೆ ಅಸ್ತು ಎಂದಿದೆ.

7 ವರ್ಷಗಳಿಂದ ನನೆಗುದಿ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಆಧುನಿಕ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣದ ಕುರಿತು ಕಳೆದ 6-7 ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಭೀಮಾ ನದಿ ಮಾತ್ರವಲ್ಲದೇ ಇಂಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಹತ್ತಾರು ಬಾರಿ ವಿಸ್ತಾರದ ಕೆರೆಗಳಿದ್ದು, ಮೀನುಗಾರಿಕೆ ಸಹಕಾರಿ ವ್ಯವಸ್ಥೆಯ 7 ಸಂಘಗಳಿವೆ. ಇಂಡಿ ತಾಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚು ಮೀನುಗಾರರು ಇದ್ದು, ಬೀದಿ ಬದಿಯಲ್ಲಿ ಮೀನುಗಳ ಮಾರಾಟದಿಂದ ರಸ್ತೆಗಳಲ್ಲಿ ಸುಳಿದಾಡುವ ಧೂಳು, ಕ್ರಿಮಿಕೀಟಗಳು ಹಾಗೂ ಸ್ವತ್ಛತೆ ಇಲ್ಲದ ಪರಿಸರದಿಂದಾಗಿ ಗುಣಮಟ್ಟದ ಮೀನು ಸಿಗುತ್ತಿರಲಿಲ್ಲ. ಇದಕ್ಕಾಗಿ ಇಂಡಿ ಪಟ್ಟಣದಲ್ಲಿ ಆಧುನಿಕ ವ್ಯವಸ್ಥೆಯ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇಂಡಿ ಸ್ಥಳ ಪರಿಶೀಲನೆ: ಇಂಡಿ ಪಟ್ಟಣದಲ್ಲಿ ಆಧುನಿಕ ಸೌಲಭ್ಯಗಳ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ಇಂಡಿ ಪುರಸಭೆ ನಿವೇಶನ ಒದಗಿಸಿದೆ. ಸುಮಾರು 10 ಸಾವಿರ ಚದರ ಮೀಟರ್‌ ವಿಸ್ತಾರದ ಸ್ಥಳ ನೀಡಿದ್ದು, ಯೋಜನೆ ಅನುಷ್ಠಾನದ ಸಾಧ್ಯತೆ ಇರುವ ಕುರಿತು ಕರ್ನಾಟಕ ಮೀನು ಅಭಿವೃದ್ಧಿ ನಿಮಗದ ವ್ಯವಸ್ಥಾಪಕ ನಿದೇಶಕ ಮಲ್ಲೇಶಪ್ಪ ದೊಡಮನಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮೀನು ಮಾರುಕಟ್ಟೆಯಿಂದೇನು ಲಾಭ?: ಜಿಲ್ಲೆಯಲ್ಲಿ ಮತ್ಸೋದ್ಯಮ ಅಭಿವೃದ್ಧಿಗೆ ಪೂರಕವಾದ ಜಲಸಂಪನ್ಮೂಲ ಇದ್ದರೂ ಮೀನು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಇದೆ. ಮೀನು ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಮೀನುಗಾರರು ಬೀದಿಗಳಲ್ಲಿ ಮೀನುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ರಸ್ತೆಬದಿಯ ಮೀನುಗಳಿಗೆ ಧೂಳು ಹಾಗೂ ಕ್ರಿಮಿಗಳು ಆವರಿಸಿ, ರೋಗಕಾರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸ್ಥಿತಿಯಲ್ಲಿ ಮಾರಾಟ ಮಾಡುವ
ಮೀನು ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

Advertisement

ಇದಲ್ಲದೇ ಬೀದಿ ಬದಿಯಲ್ಲಿ ಮೀನುಗಳ ಮಾರಾಟದಿಂದ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಕಾರಣ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗಿ ಮೀನುಗಾರರಿಗೆ ಮೀನು ಮಾರಾಟಕ್ಕೆ ಸಮಸ್ಯೆ ಆಗುತ್ತಿದೆ. ಅಲ್ಲದೇ ಮೀನುಗಳ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಹಾಗೂ ಬೀದಿ ನಾಯಿಗಳ ಹಾವಳಿಗೆ ಕಾರಣವಾಗಿ, ಸಾರ್ವಜನಿಕರಿಂದ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಇದರಿಂದಾಗಿ ಮೀನುಗಾರಿಕೆಯಲ್ಲಿ ತೊಡಗಲು ಈ ಭಾಗದ ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ.

ಇಂಥ ದುರವಸ್ಥೆಗೆ ಕಡಿವಾಣ ಹಾಕುವ ಜೊತೆಗೆ ಕಳಪೆ ಗುಣಮಟ್ಟದ ಸಂರಕ್ಷಿತವಲ್ಲದ ಮೀನು ಮಾರಾಟ ತಡೆಯಲು ಮೀನುಗಾರಿಕೆ ನಿಗಮದಿಂದ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ.

ಏನೇನು ಸೌಲಭ್ಯ?: ರಾಜ್ಯ ಸರ್ಕಾರ ನಬಾರ್ಡ್‌ ನೆರವಿನಲ್ಲಿ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ರೂಪಿಸಿದೆ. ಮೀನುಗಾರರು
ಒಂದೇ ಕಡೆ ಕುಳಿತು ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ, ಮಾರುಕಟ್ಟೆಯಲ್ಲಿ 70 ಮೀನುಗಾರರು ಪ್ರತ್ಯೇಕವಾಗಿ ಕುಳಿತು ಮೀನು ಮಾರಾಟಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತದೆ.

ಗ್ರಾಹಕರಿಗೆ ಮೀನುಗಳನ್ನು ಕತ್ತರಿಸಿ ಕೊಡಲು ಪ್ರತ್ಯೇಕ ಘಟಕ ಮಾಡಲಾಗಿದ್ದು, ಮಾರಾಟವಾಗದ ಮೀನುಗಳನ್ನು ಕೆಡದಂತೆ ಸಂಗ್ರಹಿಸಿ ಇಡಲು ಶೈತ್ಯಾಘಟಕ ಇರಲಿದೆ. ಪುರುಷ-ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿವೆ.

ಶಾಸಕರ ಮುತುವರ್ಜಿ: ಇಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರವಾಗಿಸಿ ಪ್ರತ್ಯೇಕ ಜಿಲ್ಲೆ ಮಾಡುವ ಉದ್ದೇಶ ಇರಿಸಿಕೊಂಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಆಧುನಿಕ ಸುಸಜ್ಜಿತ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿದ್ದಾರೆ.

ಜಿಲ್ಲೆಯಲ್ಲಿ ಮೀನು ಉತ್ಪಾದನೆಗೆ ಹೇರಳ ಜಲಸಂಪನ್ಮೂಲ ಇದ್ದರೂ ಮೀನು ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಜಿಲ್ಲೆಯಲ್ಲಿ ಮೀನುಗಾರಿಕೆ ಇದ್ದರೂ ಅಭಿವೃದ್ಧಿ ಪಡಿಸುವ ಹಾಗೂ ಕಡಿಮೆ ಬೆಲೆಯಲ್ಲಿ ಗರಿಷ್ಠ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಎನಿಸಿರುವ ಮೀನು ಆಹಾರ ಸೇವನೆ ಕುರಿತು ಜನರಲ್ಲಿ ಜಾಗೃತೆ ಮೂಡಿಸಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ವ್ಯಾಪಕತೆ ಪಡೆದಿಲ್ಲ. ಅಲ್ಲದೇ ಭೀಮಾ ನದಿಯಲ್ಲಿ ನೈಸರ್ಗಿಕವಾಗಿ ಮೀನುಗಳ ಸಂಪತ್ತು ಇದ್ದು, ಇದರ ಸದ್ಬಳಕೆ ಆಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮೀನುಗಾರರಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಬೀದಿ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.

ಮತ್ಸೋದ್ಯಮಕ್ಕೆ ಸಚಿವರ ಆಸಕ್ತಿ: ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಇಂಡಿ ಪಟ್ಟಣದಲ್ಲಿ ಮೀನುಗಳ ಮಾರಾಟಕ್ಕಾಗಿ ಪ್ರತ್ಯೇಕ ಹಾಗೂ ಸುಸಜ್ಜಿತ ಸೌಲಭ್ಯಗಳ ಸಹಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ಕರಾವಳಿ ಭಾಗದವರೇ ಅಗಿರುವ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕೆ ಸಚಿವರಾಗಿದ್ದು, ಮೀನು ಉದ್ಯಮವನ್ನು ಅದರಲ್ಲೂ ಒಳನಾಡು ಮೀನುಗಾರಿಕೆ ಬಲಪಡಿಸಲು ಉತ್ತರ ಕರ್ನಾಟಕದಲ್ಲಿ ಮೀನು ಮಾರಾಟಗಾರರಿಗೆ ಪ್ರತ್ಯೇಕ ಹಾಗೂ ಸುಸಜ್ಜಿತ ಮೀನು ಮಾರುಕಟ್ಟೆ
ನಿರ್ಮಿಸಿಕೊಡಲು ಮುಂದಾಗಿದ್ದಾರೆ.

ಇದಕ್ಕಾಗಿ ಕರ್ನಾಟಕ ಮೀನುಗಾರಿಕೆ ಅಭಿವ್ರದ್ದಿ ನಿಗಮದಿಂದ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದಕ್ಕಾಗಿ ಅಗತ್ಯ ಇರುವ ಅನುದಾನವನ್ನೂ ನೀಡಿದ್ದಾರೆ. ಈಗಾಗಲೇ ಮಂಜೂರಾಗಿರುವ ಹಲವು ಕಡೆಗಳಲ್ಲಿ ಮೀನು ಮಾರಾಟ ಮಾರುಕಟ್ಟೆ ಕಾಮಗಾರಿಗೆ ಚಾಲನೆ ನೀಡಿದ್ದು, ಇಂಡಿ ಪಟ್ಟಣದ ಕಾಮಗಾರಿಯನ್ನು ಕರ್ನಾಟಕ ಭೂಸೇನಾ ನಿಗಮಕ್ಕೆ ವಹಿಸಲು ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದರ ಭಾಗವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್‌.ದೊಡಮನಿ ಇವರು ಇಂಡಿ ಪಟ್ಟಣದಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ನೀಡಿರುವ ಮೀನು ಮಾರುಕಟ್ಟೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಗಂಗನಹಳ್ಳಿ ಹಾಗೂ ಪುರಸಭೆ ಮುಖ್ಯಾಧಿಕಾರಿ ವಾಲಿ ಅವರೊಂದಿಗೆ ಚರ್ಚಿಸಿದ್ದು, ಬರುವ ನವೆಂಬರ್‌ ಮೊದಲ ವಾರದಲ್ಲಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next