Advertisement

ಅಷ್ಟ ತಾಲೂಕುಗಳ ಅದೃಷ್ಟ ; ತಪ್ಪಿಲ್ಲ ಅಲೆದಾಟ

11:53 AM Sep 28, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ: ಬಿಜೆಪಿ ಸರ್ಕಾರದಲ್ಲಿ ಘೋಷಿತವಾಗಿದ್ದ ರಾಜ್ಯದ ನೂತನ ತಾಲೂಕಗಳು 2017ರಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 49 ತಾಲೂಕಗಳಲ್ಲಿ ರಚನೆಯಾಗಿದ್ದು, ಇದರಲ್ಲಿ ಅತಿಹೆಚ್ಚಿನ ತಾಲೂಕುಗಳ ರಚನೆಯಾದ ಅಗ್ರ ಸ್ಥಾನ ವಿಜಯಪುರ ಜಿಲ್ಲೆಗೆ ಸೇರಿತ್ತು.

Advertisement

ಬಸವನಾಡು ಎಂದೇ ಕರೆಸಿಕೊಳ್ಳುವ ಈ ಜಿಲ್ಲೆಯ ಮೂಲ ಐದು ತಾಲೂಕುಗಳನ್ನು ವಿಭಜಿಸಿ, ಹೊಸದಾಗಿ ಸರ್ಕಾರ 7 ತಾಲೂಕು ಘೋಷಿತ್ತು. ಇದರ ನಂತರ ಪ್ರಸಕ್ತ ವರ್ಷ ಸಿಂದಗಿ ತಾಲೂಕನ್ನು ಮತ್ತೆ ವಿಭಜಿಸಿ ನೂತನ ಆಲಮೇಲ ತಾಲೂಕನ್ನು ಘೋಷಿಸಿದ್ದು, ರಾಜ್ಯದಲ್ಲೇ ನೂತನ 8 ತಾಲೂಕು ಹೊಂದಿದ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮೂಲ ಐದು ತಾಲೂಕಗಳಿದ್ದು, ಮುದ್ದೇಬಿಹಾಳ ತಾಲೂಕಿನಿಂದ ತಾಳಿಕೋಟೆ, ಬಸವನಬಾಗೇವಾಡಿ ತಾಲೂಕಿನಿಂದ ನಿಡಗುಂದಿ, ಕೊಲ್ಹಾರ, ವಿಜಯಪುರ ತಾಲೂಕಿನಿಂದ ಬಬಲೇಶ್ವರ, ತಿಕೋಟಾ, ಇಂಡಿ ತಾಲೂಕಿನಿಂದ ಚಡಚಣ ಹಾಗೂ ಸಿಂದಗಿ ತಾಲೂಕಿನಿಂದ ದೇವರಹಿಪ್ಪರಗಿ ಪ್ರತ್ಯೇಕ ತಾಲೂಕುಗಳನ್ನು 2017ರಲ್ಲಿ ಘೋಷಿಸಲಾಗಿದೆ.

ಅಧಿಸೂಚನೆ ಹೊರಡಿಸದ ಆಲಮೇಲ ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಮೂಲ ಐದು ತಾಲೂಕು ಹಾಗೂ ನೂತನ ಎಂಟು ತಾಲೂಕು ಸೇರಿ 13 ತಾಲೂಕು ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಕುಮಾರಸ್ವಾಮಿ ಸರ್ಕಾರ ರಾಜ್ಯ ಮತ್ತೆ ನೂತನ 12 ತಾಲೂಕು ರಚನೆ ಸಂದರ್ಭದಲ್ಲಿ ಸಿಂದಗಿ ತಾಲೂಕನ್ನು ಮತ್ತೆ ವಿಭಜಿಸಿ ಆಲಮೇಲ ತಾಲೂಕನ್ನು ರಚಿಸಲಾಗಿದೆ. ಈ ನೂತನ ತಾಲೂಕು ರಚಿಸಿಕೊಳ್ಳುವಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿಂದಗಿ ಶಾಸಕ ಎಂ.ಸಿ. ಮನಗೂಳಿಯಶಸ್ವಿಯಾಗಿದ್ದಾರೆ. ಆದರೆ ಈ ತಾಲೂಕು ರಚನೆ ಕುರಿತು ಜಿಲ್ಲಾಡಳಿತ ಕಳಿಸಿರುವ ಪ್ರಸ್ತಾವನೆಗೆ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸದ ಕಾರಣ ಇನ್ನೂ ಇದಕ್ಕೆ ಮಾನ್ಯತೆ ಸಿಕ್ಕಿಲ್ಲ.

ಘೋಷಿತ ನೂತನ ಏಳು ತಾಲೂಕುಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಸರ್ಕಾರ ತಲಾ 5 ಲಕ್ಷ ರೂ. ನೀಡಿದೆ. ಈಗಾಗಲೇ ನೂತನ ತಾಲೂಕು ಕೇಂದ್ರಗಳಲ್ಲಿ ಭೂದಾಖಲೆಗಳ ಅಭಿಲೇಖಾಲಯ ಹೊರತುಪಡಿಸಿ ಇತರೆ ಎಲ್ಲ ಕಚೇರಿಗಳನ್ನು ಕಳೆದ 3 ತಿಂಗಳ ಹಿಂದೆಯೇ ತನ್ನ ಅಸ್ತಿತ್ವದಲ್ಲಿದ್ದ ನಾಡ ಕಚೇರಿಗಳಿಗೆ ಸ್ಥಳಾಂತರಿಸಿದೆ.

Advertisement

ಸರ್ಕಾರ ನೀಡಿರುವ 5 ಲಕ್ಷ ರೂ.ಗಳಲ್ಲಿ ಕಂದಾಯ ಇಲಾಖೆ ಹಣದಲ್ಲಿ ಕುರ್ಚಿ, ಟೇಬಲ್‌, ಕಂಪ್ಯೂಟರ್‌ ಕೊಳ್ಳಲು ಖರ್ಚು ಮಾಡಿದೆ.

ಇದರ ಹೊರತಾಗಿ ಸರ್ಕಾರ ಮೂಲಭೂತ ಸೌಕರ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಕಳೆದ ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್‌ 31ರಂದು ಪ್ರತಿ ತಾಲೂಕಿಗೆ 5 ಲಕ್ಷ ರೂ. ಬಿಡುಗಡೆ ಮಾಡಿದ ಆದೇಶ ಜಿಲ್ಲಾಡಳಿತಕ್ಕೆ ತಲುಪಿತೆ ಹೊರತು, ಹಣ ಮಾತ್ರ ಕೈಗೆ ಬರಲಿಲ್ಲ. ಇದರ ಮಧ್ಯೆ ಅಧಿಸೂಚನೆ ಆಗಿರುವ ಏಳು ತಾಲೂಕುಗಳಲ್ಲಿ ತಿಕೋಟಾ ಹಾಗೂ ಬಬಲೇಶ್ವರ ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳು ಮಂಜೂರಾಗಿದ್ದು, ಇತರೆ ಐದು ತಾಲೂಕಿಗೆ ಈ ಭಾಗ್ಯ ಸಿಕ್ಕಿಲ್ಲ.

ಮುಖ್ಯವಾಗಿ ಪ್ರತಿ ತಾಲೂಕುಗಳಲ್ಲಿ ಖಜನಾ ಇಲಾಖೆ ತೆರೆದು, ಪ್ರತಿ ಕೇಂದ್ರಕ್ಕೆ ಪ್ರತ್ಯೇಕ ಕೋಡ್‌ ನೀಡುವ ಕೆಲಸ ಪ್ರಮುಖವಾಗಿ ಆಗಬೇಕಿದೆ. ತಹಸೀಲ್ದಾರ್‌ ಹುದ್ದೆಯೇ ಖಾಲಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಏಳು ತಾಲೂಕುಗಳಲ್ಲಿ ಆರು ಕೇಂದ್ರಗಳಿಗೆ ತಹಶೀಲ್ದಾರ್‌ ನೇಮಕವಾಗಿದ್ದು, ಓರ್ವ ತಹಶೀಲ್ದಾರ್‌ ನಿವೃತ್ತಿ ಕಾರಣ ನೂತನ ಎರಡು ತಾಲೂಕುಗಳಲ್ಲಿ ತಹಶೀಲ್ದಾರ್‌ ಹುದ್ದೆ ಖಾಲಿ ಬಿದ್ದಿವೆ. ಇರುವ ಸಿಬ್ಬಂದಿಯಲ್ಲೇ ಕಂದಾಯ ಇಲಾಖೆ ಪಿಂಚಣಿ, ಪಹಣಿ, ಜಾತಿ-ಆದಾಯ ಸೇರಿದಂತೆ ಕಂದಾಯ ಇಲಾಖೆ ಭೂ ದಾಖಲೆ ಹೊರತುಪಡಿಸಿ ಎಲ್ಲ ಸೇವೆಗಳನ್ನು ನೀಡುವಲ್ಲಿ ಕಾರ್ಯಾರಂಭ ಮಾಡಿವೆ. ಆದರೆ ಅಗತ್ಯ ಸಿಬ್ಬಂದಿ ನೇಮಕವಿಲ್ಲ, ಸೌಲಭ್ಯಗಳಿಲ್ಲ ಎಂಬ ಅಪಸ್ವರಗಳ ಮಧ್ಯೆ ಕಳೆದ ಒಂದು ವರ್ಷದಿಂದ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರ್‌ಗೆ ಕರ್ತವ್ಯ ನಿರ್ಹಹಿಸಲು ವಾಹನಗಳೇ ಇಲ್ಲ. ಹೀಗಾಗಿ ಕೆಳ ಹಂತದ ಸಿಬ್ಬಂದಿ ಬೈಕ್‌ಗಳ ಮೇಲೆ ತಾಲೂಕು ಸುತ್ತುವ ಪರಿಸ್ಥಿತಿ ಇದೆ.

ಇನ್ನು ಸುಮಾರು 25ಕ್ಕೂ ಹೆಚ್ಚು ವಿವಿಧ ಇಲಾಖೆಗಳನ್ನು ಒಳಗೊಂಡಿರುವ ಗ್ರಾಮೀಣಾಭಿವೃದ್ಧಿ ಕಂದಾಯ ಇಲಾಖೆ ಮಾತ್ರ
ಸರ್ಕಾರ ಯಾವುದೇ ರೀತಿಯಲ್ಲೂ ಅನುದಾನ ನೀಡಿಲ್ಲ. ಇದರಿಂದಾಗಿ ಒಂದೇ ಒಂದು ಕಚೇರಿಯನ್ನು ನೂತನ ತಾಲೂಕು ಕೇಂದ್ರದಲ್ಲಿ
ತೆರೆಯಲು ಸಾಧ್ಯವಾಗಿಲ್ಲ. ಕಳೆದ ಎಂಟು ತಿಂಗಳ ಹಿಂದೆಯೇ ನೂತನ ತಾಲೂಕುಗಳಲ್ಲಿ ಕಚೇರಿಗಳನ್ನು ತೆರೆಯುವ ಕುರಿತು ಜಿಲ್ಲಾ ಪಂಚಾಯತ್‌ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ನೂತನ ತಾಲೂಕುಗಳ ತಾಪಂ ಇಒ ಹಾಗೂ ಸಿಬ್ಬಂದಿ ಹುದ್ದೆಗಳ ಮಂಜೂರಾತಿ ನೀಡಿದೆ.

ಇದರ ಹೊರತಾಗಿ ಸಿಬ್ಬಂದಿ ನೇಮಕ ಹಾಗೂ ಮೂಲ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ನೂತನ ತಾಲೂಕು ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಕಚೇರಿ ತೆರೆಯುವುದು ಅಷ್ಟು ಸುಲಭದ ಮಾತೂ ಅಲ್ಲ. ಒಂದೊಮ್ಮೆ ಸೌಲಭ್ಯಗಳಿಲ್ಲದೇ ತರಾತುರಿಯಲ್ಲಿ ಕಂದಾಯ ಇಲಾಖೆ ಕಚೇರಿ ಬಳಲುವ ಸ್ಥಿತಿ ಇತರೆ ಇಲಾಖೆಗೆ ಬರುವುದು ಖಚಿತ.

ನೂತನ ತಾಲೂಕುಗಳಲ್ಲಿ ಪ್ರಮುಖವಾಗಿ ತಾಪಂ ಅಸ್ತಿತ್ವಕ್ಕೆ ಬರಬೇಕು. ಈಗಾಗಲೇ ಮೂಲ ತಾಲೂಕಿನಲ್ಲಿ ಆಯ್ಕೆಯಾಗಿ ನೂತನ ತಾಲೂಕಿನ ವ್ಯಾಪ್ತಿಗೆ ಸೇರುವ ಕ್ಷೇತ್ರಗಳ ಸದಸ್ಯರನ್ನು ಪ್ರತ್ಯೇಕಿಸುವ ಕೆಲಸವಾಗಬೇಕು. ನೂತನ ತಾಲೂಕುಗಳ ಅಧ್ಯಕ್ಷ- ಉಪಾಧ್ಯಕ್ಷ ಮೀಸಲು ಘೋಷಣೆಯಾಗಿ ಚುನಾವಣೆ ನಡೆದು, ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು. ಮಂಜೂರಾದ ಹುದ್ದೆಗಳಿಗೆ ಅಧಿಕಾರಿ-ಸಿಬ್ಬಂದಿಗಳ ನೇಮಕ ಆಗದಿದ್ದಲ್ಲಿ ಮೂಲ ತಾಲೂಕುಗಳ ಅಧಿಕಾರಿ-
ಸಿಬ್ಬಂದಿಯನ್ನೇ ನೂತನ ತಾಲೂಕುಗಳ ಪ್ರಭಾರ ನೀಡುವುದು ಅನಿವಾರ್ಯವಾಗುತ್ತದೆ.

ಇದರ ಹೊರತಾಗಿ ಶಿಕ್ಷಣ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ಇತರೆ ಯಾವುದೇ ಇಲಾಖೆಗಳು ನೂತನ ತಾಲೂಕು ಕೇಂದ್ರಗಳಲ್ಲಿ ತಮ್ಮ ಕಚೇರಿ ತೆರೆಯುವ ಕುರಿತು ಮಾಡಿಕೊಂಡಿರುವ ಸಿದ್ಧತೆ ಕುರಿತು ಮಾಹಿತಿ ಇಲ್ಲ. ಸರ್ಕಾರ ಕೂಡ ಈ ಕುರಿತು ನಿಖರವಾಗಿ ಏನೂ ಹೇಳಿಲ್ಲದ ಕಾರಣ ಜಿಪಂ ಅಧಿಕಾರಿಗಳು ಕೂಡ ಇತರೆ ಇಲಾಖೆಗಳ ವಿಷಯದಲ್ಲಿ ತಲೆ ಕೆಡಿಸಿಕೊಂಡಿಲ್ಲ. ಪರಿಣಾಮ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ನೂತನ ತಾಲೂಕು ರಚಿಸಿದ ಜಿಲ್ಲೆ ಎಂಬ ಹೆಸರಾದರೂ ಹೊಸ ತಾಲೂಕುಗಳು ಕೆಲಸಕ್ಕಿಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next