ವಿಜಯಪುರ: ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ವೈದ್ಯರ ಮೇಲೆ ಕರವೇ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಒಪಿಡಿ ಬಂದ್‌ಗೆ ಕರೆ ನೀಡಲಾಗಿತ್ತು.
ಇದಕ್ಕೆ ವಿಜಯಪುರ ಜಿಲ್ಲೆಯಲ್ಲೂ ಸೂಕ್ತ ಸ್ಪಂದನೆ ದೊರಕಿದೆ. ಪರಿಣಾಮ ಜಿಲ್ಲೆಯ 130ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗದ ಕಾರಣ ರೋಗಿಗಳು ಪರದಾಡಿದರು.
ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿ, ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿದ ಫಲಕಗಳು ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ನೇತಾಡುತ್ತಿದ್ದವು. ಇದರಿಂದ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿದ ಕುರಿತು ಸೂಕ್ತ ಮಾಹಿತಿ ಇಲ್ಲದೇ ಜಿಲ್ಲೆಯ ಹಳ್ಳಿಗಳಿಂದ ನಗರಕ್ಕೆ ಆಗಮಿಸಿದ್ದ ಸಾವಿರಾರು ಸಂಖ್ಯೆಯ ರೋಗಿಗಳು ಪರದಾಡುವಂತೆ ಮಾಡಿತು.
ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆ, ತಾಲೂಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿಢೀರನೇ ಏರಿಕೆ ಕಂಡು ಬಂದ ಕಾರಣ ಚಿಕಿತ್ಸೆ ಪಡೆಯಲು ರೋಗಿಗಳ ಸರತಿ ಸಾಲು ದೊಡ್ಡದಾಗಿ ಕಂಡು ಬಂತು. ಹೀಗಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯರು-ನರ್ಸಗಳು ಆಗತ್ಯ ವೈದ್ಯಕೀಯ ಸೇವೆ ನೀಡುವಲ್ಲಿ ನಿರತರಾಗಿದ್ದರು.
ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1200 ಸಂಖ್ಯೆಯಲ್ಲಿರುತ್ತಿದ್ದ ರೋಗಿಗಳ ಸಂಖ್ಯೆ ಕನಿಷ್ಠ ನೂರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇದ್ದ ರೋಗಿಗಳ ಸಂಖ್ಯೆಗಿಂದ ಖಾಸಗಿ ಆಸ್ಪತ್ರೆಗೆಗಳ ವೈದ್ಯರ ಸೇವೆ ಸ್ಥಗಿತ ಹೋರಾಟದ ಹಿನ್ನೆಲೆಯಲ್ಲಿ ನೂರಾರು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿದ್ದು ಕಂಡು ಬಂತು.