ವಿಜಯಪುರ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡದಂತೆ ವಿಜಯಪುರ ಜಿಲ್ಲೆಯ ಮಠಾಧೀಶರ ದಂಡು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಖಚಿತ ಎಂಬ ಸಂದೇಶ ಹೊರಬರುತ್ತಲೇ, ಗುರುವಾರ ನಗರದಲ್ಲಿ ಬಬಲೇಶ್ವರ ಡಾ.ಮಹದೇವ ಶ್ರೀಗಳ ನೇತೃತ್ವದಲ್ಲಿ 15-20 ಮಠಾಧೀಶರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸದಂತೆ ಬಿಜೆಪಿ ಹೈಕಮಾಂಡಗೆ ಆಗ್ರಹಿಸಿದರು.
ಬಿಜೆಪಿ ರಾಜ್ಯದಲ್ಲಿ ಬಲಿಷ್ಠವಾಗಿ ನೆಲೆಯೂರಲು ಹಾಗೂ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆಯೇ ಪ್ರಮುಖ ಕಾರಣ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ವ್ಯಕ್ತಿಯನ್ನು ಏಕಾಏಕಿ ಅಧಿಕಾರದಿಂದ ಕೆಳಗಿಳಸುವ ಚಿಂತನೆ ಇದ್ದರೆ ತಕ್ಷಣ ಅದರಿಂದ ಹಿಂದೆ ಅರಿಯಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಉಳಿಕೆಯ ಅಧಿಕಾರವನ್ನು ಪೂರ್ಣ ಅವಧಿ ವರೆಗೆ ಮುಂದುವರೆಸಬೇಕು ಎಂದು ಮಠಾಧೀಶರು ಒಕ್ಕೋರಲಿನಿಂದ ಆಗ್ರಹಿಸಿದರು.
ಪತ್ರಿಕಾಗೋಷ್ಠಿಗೆ ಮುನ್ನ ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿದ ವಿವಿಧ ಮಠಾಧೀಶರು ಚರ್ಚೆ ನಡೆಸಿದರು.
ಮನಗೂಳಿ ಅಭಿನವ ಸಂಗನಬಸವ ಶ್ರೀ, ಬುರಣಾಪುರದ ಯೋಗೇಶ್ವರಿ ಮಾತಾಜಿ, ಶಂಕರಾನಂದ ಸ್ವಾಮಿಜಿ, ಶಂಭುಲಿಂಗ ಸ್ವಾಮಿಜಿ, ನಾಗಠಾಣ ಸ್ವಾಮಿಜಿ, ಮಲ್ಲಿಕಾರ್ಜುನಶ್ರೀ, ಮುತ್ತಗಿ ಸ್ವಾಮಿಜಿ, ತಿಕೋಟಾ ಸ್ವಾಮಿಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಭೆಯಲ್ಲಿ ಭಾಗಿಯಾಗಿದ್ದರು