ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ರಾಜ್ಯ ಮಟ್ಟದಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 23,607 ಪರೀಕ್ಷಾರ್ಥಿಗಳಲ್ಲಿ 12,799 ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ವಿಜಯಪುರ ಜಿಲ್ಲೆ ಶೇ 54.22 ಫಲಿತಾಂಶದೊಂದಿಗೆ ರಾಜ್ಯದ 32ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ವರ್ಷ ಶೇ. 68.55 ರಷ್ಟು ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಪಡೆದಿದ್ದ ವಿಜಯಪುರ ಜಿಲ್ಲೆ ಈ ಬಾರಿ ಕೊನೆಯ ಸ್ಥಾನಕ್ಕೆ ಜಾರಿರುವುದು ಜಿಲ್ಲೆಯ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ನಿರಾಶೆಯ ಭಾವನೆಯನ್ನು ಮೂಡಿಸಿದೆ.
ಈ ಬಾರಿಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.43.22, ವಾಣಿಜ್ಯ ವಿಭಾಗದಲ್ಲಿ ಶೇ.61.28 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.68.11ರಷ್ಟು ಫಲಿತಾಂಶ ಲಭಿಸಿದೆ.
ಜಿಲ್ಲೆಯಲ್ಲಿ ಶೇ 58.81ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. ಶೇ. 43.90 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ ದಡ್ಡಿ ಮಾಹಿತಿ ನೀಡಿದ್ದಾರೆ.