Advertisement

ಮಕ್ಕಳ ಹಕ್ಕುಗಳ ಸಂರಕ್ಷಣೆ ಅಗತ್ಯ

11:54 AM Nov 08, 2019 | Naveen |

ವಿಜಯಪುರ: ಎಲ್ಲ ಮಕ್ಕಳಿಗೂ ಶಿಕ್ಷಣ ಹಾಗೂ ಇತರೆ ಸೌಲಭ್ಯ ಪಡೆಯುವ ಹಕ್ಕುಗಳಿವೆ. ಆದರೆ ಬಡತನ, ಅನಕ್ಷರತೆ, ಮೂಢನಂಬಿಕೆಗಳಂಥ ಕಾರಣಗಳಿಂದಾಗಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯ ಸೆಳೆವಿಗೆ ಬೀಳುವ ಮಕಳು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಸನ್ನಕುಮಾರ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ರುಕ್ಮಾಂಗದ ಪ್ರೌಢಶಾಲೆಯ ಸಭಾಭವನದಲ್ಲಿ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ-1098 ಹಾಗೂ ರುಕ್ಮಾಂಗದ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಕ್ಕಳ ಹಕ್ಕುಗಳ ಸಂಸತ್‌-2019 ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಡತನ, ಅನಕ್ಷರತೆಯಂಥ ಹಲವು ಕಾರಣಗಳಿಂದ ಮಕ್ಕಳು ಅರ್ಧದಲ್ಲೆ ಶಾಲೆ ಬಿಡುತ್ತಿದ್ದು, ಶಿಕ್ಷಣ ಹಾಗೂ ಇತರೆ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ತಮ್ಮ ಹಕ್ಕುಗಳಿಗಾಗಿ ಮಕ್ಕಳು ಮುಕ್ತವಾಗಿ ಹಾಗೂ ಗಟ್ಟಿಧ್ವನಿಯಲ್ಲಿ ನಿಮ್ಮ ಸಮಸ್ಯೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಬಿ.ಕುಂಬಾರ ಮಾತನಾಡಿ, ಮಕ್ಕಳ ಸಂಸತ್‌ ಕಾರ್ಯಕ್ರಮದಲ್ಲಿ ಮಕ್ಕಳ ಸಮಸ್ಯೆಗಳು, ಪರಿಹಾರಗಳು ಸರಿಯಾಗಿ ನಿರ್ಭಯವಾಗಿ ಭಾಗವಹಿಸಿ ಮಾತನಾಡಬೇಕು.

ವಿಧಾನ ಸೌಧದಲ್ಲಿ ನಮ್ಮ ಜಿಲ್ಲೆಯ ಮಕ್ಕಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಆಶಿಸಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಉಜ್ವಲ ಸಂಸ್ಥೆಯ ವಾಸುದೇವ ತೋಳಬಂದಿ ಮಾತನಾಡಿ, ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ ಪಾಲ್ಗೊಂಡಿರುವ ಎಲ್ಲ 54 ಮಕ್ಕಳು ಪ್ರತಿಭಾವಂತರಿದ್ದಾರೆ.

Advertisement

ಪ್ರಸ್ತುತ ಸಂದರ್ಭದಲ್ಲಿ ಪ್ರತಿ ಮಗುವಿಗೆ ಒಳ್ಳೆಯ ಪರಿಸರ ಪ್ರೋತ್ಸಾಹದ ಅಗತ್ಯವಿದೆ. ಪ್ರಾರಂಭದಲ್ಲಿ ಅಸಾಧ್ಯ ಎನಿಸಿದರೂ ಸಾಧ್ಯ ಮಾಡುವ ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಛಲಗಾರಿಕೆಯ ಕಿರುಚಿತ್ರಗಳ ಪ್ರಾತ್ಯಕ್ಷಿಕೆ ಮೂಲಕ ಸಂಸತ್‌ಗಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಎಕ್ಸ್‌ಲೆಂಟ್‌ ಶಾಲೆಯ 8ನೇ ವರ್ಗದ ವಿದ್ಯಾರ್ಥಿನಿ ವರದಾ ನೀರಮಣಿಗಾರ ಹಾಗೂ ರುಕ್ಮಾಂಗದ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ ನಬಿಲಾಲ ಮುಜಾವರ ಆಯ್ಕೆ ಮಾಡಲಾಯಿತು. ಸುನಂದಾ ಕುಲಕರ್ಣಿ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಣಾಧಿಕಾರಿ ಡಿ.ಜಿ. ಚಾಳಿಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next