ವಿಜಯಪುರ: ಜೆಡಿಎಸ್-ಕಾಂಗ್ರೆಸ್ ಸರ್ಕಾರ ದಕ್ಷಿಣ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಮೀಸಲಾಗಿತ್ತು ಎಂದು ಆರೋಪಿಸಿ ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ 17 ಕ್ಷೇತ್ರಗಳ ಶಾಸಕರು ರಾಜೀನಾಮೆ ನೀಡಿದ್ದು, ಈಗ 15 ಕ್ಷೇತ್ರಗಳಿಗೆ ಇದೇ ಕಾರಣಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅದರೆ ಹಾಲಿ ಬಿಜೆಪಿ ಸರ್ಕಾರದಲ್ಲಿ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶದ ಹಲವು ಸೌಲಭ್ಯಗಳನ್ನು ಸದ್ದಿಲ್ಲದೇ ಕಿತ್ತುಕೊಳ್ಳುತ್ತಿದ್ದರೂ ಯಾರೂ ಮೌನ ಮುರಿಯುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರ ಹುದ್ದೆಯನ್ನು ಸಹಾಯಕ ನಿರ್ದೇಶಕರ ಕೆಳದರ್ಜೆಗೆ ಕುಗ್ಗಿಸಿ ಸರ್ಕಾರ ಆದೇಶ ಹೊರಡಿಸುವ ಮೂಲಕ ಪ್ರಾದೇಶಿಕ ಅಸಮಾನತೆಗೆ ಮುಂದುವರಿಸಿದೆ.
Advertisement
ರಾಜ್ಯದಲ್ಲೇ ಪ್ರವಾಸೋದ್ಯಮದ ವಿಷಯದಲ್ಲಿ ಖಜಾನೆ ಎನಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕಚೇರಿ ಇದೆ. ಸಹಾಯಕ ನಿರ್ದೇಶಕರ ದರ್ಜೆಯನ್ನು ನೀಡಿದ್ದರೂ ಕಳೆದ ಒಂದೂವರೆ ದಶಕದಿಂದ ಈ ಹುದ್ದೆಗೆ ಅಧಿಕಾರಿಯನ್ನೇ ನೇಮಿಸದೇ ವಿವಿಧ ಇಲಾಖೆ ಪ್ರಭಾರಿ ಅಧಿಕಾರಿಗಳನ್ನೇ ಮುಂದುವರಿಸಿತ್ತು. ಇದರಿಂದ ವಿಜಯಪುರ ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದೆ ಹಿಂದುಳಿದಿದೆ. ಇದನ್ನು ಮನಗಂಡಿದ್ದ ಈ ಸಹಾಯಕ ನಿರ್ದೇಶಕರ ಹುದ್ದೆಗೆ ಅಧಿ ಕಾರಿಯನ್ನು ನೇಮಿಸುವ ಬದಲು ಸರ್ಕಾರ 29-4-2016ರಲ್ಲಿ ಇದ್ದ ಹುದ್ದೆಯನ್ನು ಏಕಾಏಕಿ ಉನ್ನತೀಕರಿಸಿ ಉಪ ನಿರ್ದೇಶಕರ ಹುದ್ದೆಗೆ ಕಚೇರಿಗೆ ಬಡ್ತಿ ನೀಡಿತು. ಕೆಎಎಸ್ ದರ್ಜೆ ಅಧಿಕಾರಿಯನ್ನು ನೇಮಿಸುವ ಹಂತದ ಈ ಹುದ್ದೆಯ ಅಧಿಕಾರಿಗಳೇ ಆಡಳಿತ ನಡೆಸುವ ಮಟ್ಟಕ್ಕೆ ಏರಿತು. ಅದರೆ ಸರ್ಕಾರ ಸದರಿ ಹುದ್ದೆಯನ್ನು ಉನ್ನತಿಕರಿಸಿತೇ ಹೊರತು ಆಗಲೂ ಪೂರ್ಣ ಪ್ರಮಾಣದ ಅಧಿಕಾರಿಯನ್ನು ನೇಮಿಸಲಿಲ್ಲ. ಹೀಗಾಗಿ ಅಂಕಿಸಂಖ್ಯೆ, ಕಂದಾಯ, ಆರಣ್ಯ ಇಲಾಖೆಗಳ ಅಧಿಕಾರಿಗಳು ಪ್ರಭಾರಿ ಹುದ್ದೆ ನಿರ್ವಹಿಸಿದ್ದರು. ಈ ಕುರಿತು ಉದಯವಾಣಿ ಪತ್ರಿಕೆ ಪ್ರವಾಸೋದ್ಯಮ ಕಥೆ-ವ್ಯಥೆ ಸರಣಿ ಲೇಖನಗಳ ಮೂಲಕ ಇಲಾಖೆ ಸಮಸ್ಯೆ ಮೇಲೆ ಬೆಳಕು ಚಲ್ಲಲು ಮುಂದಾಗಿತ್ತು. ಈ ಹಂತದಲ್ಲಿ ಸರ್ಕಾರ ಕಳೆದ ತಿಂಗಳಷ್ಟೇ ಧಾರವಾಡ ಜಿಲ್ಲೆಯಲ್ಲಿದ್ದ ಮಲ್ಲಿಕಾರ್ಜುನ ಭಜಂತ್ರಿ ಎಂಬ ಅ ಧಿಕಾರಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಿಸಿತ್ತು.
Related Articles
Advertisement
ಉನ್ನತ ದರ್ಜೆಗೆ ಏರುವ ಬದಲು ಹಿಂಬಡ್ತಿ ಪಡೆದಿರುವ ವಿಜಯಪುರ ಪ್ರವಾಸೋದ್ಯಮ ಇಲಾಖೆ ಕಚೇರಿಯ ಹೊಸ ಹುದ್ದೆಯ ಬದಲಾವಣೆ ಇನ್ನೂ ಆಗಿಲ್ಲ. ಪರಿಣಾಮ ಸದರಿ ಇಲಾಖೆಯ ವಿಜಯಪುರ ಕಚೇರಿಯ ಸಿಬ್ಬಂದಿ ಸಂಬಳ ಇಲ್ಲದೇ ಪರವಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಹಾಯಕ ನಿರ್ದೇಶಕರ ದರ್ಜೆಗೆ ಕುಸಿತ ಕಾಣುವಲ್ಲಿ ಐಎಎಸ್ ಅ ಧಿಕಾರಿಯೊಬ್ಬರ ಕಾಣದ ಕೈ ಕೆಲಸ ಮಾಡಿದೆ ಎನ್ನಲಾಗಿದೆ. ಉತ್ತರ ಭಾರತದ ಸೇವೆಯಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯ ಪತ್ನಿಯೊಬ್ಬರು ಕೆಎಎಸ್ ದರ್ಜೆಯೆ ಹುದ್ದೆ ಅಧಿಕಾರಿಯಾಗಿದ್ದು, ಅವರಿಗೆ ಧಾರವಾಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ದೆಯನ್ನು ಕಲ್ಪಿಸಲು ಮುಂದಾಗಿದೆ. ಹೀಗಾಗಿ ಐಎಎಸ್ ಅಧಿಕಾರಿ ಲಾಬಿಗೆ ಮಣಿದಿರುವ ಬಿಜೆಪಿ ಸರ್ಕಾರ ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರ ಹುದ್ದೆಯನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂಬ ಶಂಕೆ ಹೊರ ಬಿದ್ದಿದೆ.
ಈ ಶಂಕೆ ನಿಜವೇ ಆಗಿದ್ದಲ್ಲಿ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಸೌಲಭ್ಯ ಹಾಗೂ ವಿಶೇಷ ಅನುದಾನ ನೀಡಿ ಪ್ರಾದೇಶಿಕ ಅಸಮಾನತೆ ದೂರ ಮಾಡುವ ಬದಲು ಇದ್ದುದನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆ ಅಗಿರುವ 8 ಕೋಟಿ ರೂ. ಅನುದಾನ ಉಳಿಸಿಕೊಳ್ಳುವ ಹಾಗೂ ಉಪ ನಿರ್ದೇಶಕರ ಹುದ್ದೆಯನ್ನು ಸಹಾಯಕ ನಿರ್ದೇಶಕ ಎಂದು ಕೆಳ ದರ್ಜೆಗೆ ಕುಗ್ಗಿಸುವ ಮೂಲಕ ಪ್ರಾದೇಶಿಕ ಅಸಮಾನತೆಯ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಅಚ್ಚರಿ ಸಂಗತಿ ಎಂದರೆ ಅಭಿವೃದ್ಧಿಯಲ್ಲಿ ಅಂತ್ಯಂತ ಹಿಂದೆ ಬಿದ್ದಿರುವ ವಿಜಯಪುರ ಜಿಲ್ಲೆ ಅದರಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಕಿಂಚಿತ್ ಕಾಳಜಿ ವಹಿಸುತ್ತಿಲ್ಲ. ಜಿಲ್ಲೆಗೆ ಬಂದಿದ್ದ ಪ್ರವಾಸಿ ಬಸ್ ಮರಳಿ ಬೆಂಗಳೂರಿಗೆ ಹೋದರೂ ಮೌನ ಮುರಿದಿಲ್ಲ, ಎನ್ನುವುದಕ್ಕಿಂತ ಈ ವಿಷಯ ಜಿಲ್ಲೆಯ ಜನಪ್ರತಿನಿ ಧಿಗಳಿಗೆ ಗೊತ್ತೆ ಇಲ್ಲ. ಜಿಲ್ಲೆಯ 8 ಕೋಟಿ ರೂ. ಅನುದಾನ ಹಿಂಪಡೆಯುವ ಕುರಿತು ಸಚಿವರು ಜಿಲ್ಲೆಗೆ ಬಂದು ಘೋಷಿಸಿದರೂ ಜಿಲ್ಲೆಯ ಆಡಳಿತ-ವಿಪಕ್ಷದ ಯಾವೊಬ್ಬ ಶಾಸಕರೂ ಚಕಾರ ಎತ್ತಿಲ್ಲ ಎಂಬುದು ನಮ್ಮವರ ನಿರ್ಲಕ್ಷ್ಯಕ್ಕೆ ಸಾಕ್ಷಿ.
ಜಿಲ್ಲೆಯ ಜನಪ್ರತಿನಿಧಿ ಗಳ ಇಂಥ ಸೀನಿಕ ಮನಸ್ಥಿತಿಯನ್ನು ಮನಗಂಡಿರುವ ದಕ್ಷಿಣ ಭಾಗದ ರಾಜಕೀಯ ನಾಯಕರು ಈ ಭಾಗದಲ್ಲಿರುವ ಒಂದೊಂದೇ ಸೌಲಭ್ಯವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇದೀಗ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಸಹಾಯಕ ನಿರ್ದೇಶಕ ಹುದ್ದೆಗೆ ಇಳಿಸುವ ಮೂಲಕ, ಇಲ್ಲಿನ ಹುದ್ದೆಯನ್ನು ಬೇರಡೆ ಸ್ಥಳಾಂತರಕ್ಕೆ ಮುಂದಾಗಿದೆ.
ಉಪ ನಿರ್ದೇಶಕರ ಹುದ್ದೆಯ ಕಚೇರಿಗೆ ಧಕ್ಕೆ ಇಲ್ಲ. ಉಪ ನಿರ್ದೇಶಕರ ದರ್ಜೆಯ ಹುದ್ದೆಗೆ ಕೆಎಎಸ್ ಹಿರಿಯ ದರ್ಜೆಯ ಅಧಿಕಾರಿಗಳು ವಿಜಯಪುರಕ್ಕೆ ಬರಲು ಒಪ್ಪುತ್ತಿಲ್ಲ, ಹೀಗಾಗಿ ಈ ದರ್ಜೆಯ ಲಭ್ಯ ಇಲ್ಲವಾಗಿದೆ. ಕಾರಣ ಉಪ ನಿರ್ದೇಶಕರ ಹುದ್ದೆಗೆ ಸಹಾಯಕ ನಿರ್ದೇಶಕ ದರ್ಜೆಯ ಅಧಿಕಾರಿಯನ್ನು ನೇಮಿಸಿದೆ. ಹೀಗಾಗಿ ಸರ್ಕಾರ ಆಡಳಿತದ ಅನುಕೂಲಕ್ಕಾಗಿ ಸದರಿ ಹುದ್ದೆಯನ್ನು ಮಾತ್ರ ಕೆಳದರ್ಜೆಗೆ ಇಳಿಸಿದೆಯೇ ಹೊರತು, ಕಚೇರಿಯನ್ನಲ್ಲ.ವೈ.ಎಸ್. ಪಾಟೀಲ,
ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು,
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ವಿಜಯಪುರ