Advertisement

Vijayapura ಡಿಡಿಪಿಐ ಹುದ್ದೆಗೆ ಮತ್ತೆ ಕಿತ್ತಾಟ

03:40 PM Feb 09, 2024 | Team Udayavani |

ವಿಜಯಪುರ: ಅಮಾನತು ಆದೇಶಕ್ಕೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಅಧಿಕಾರಿ ಹಾಗೂ ಪ್ರಭಾರಿ ಹುದ್ದೆಯಲ್ಲಿರುವ ಅಧಿಕಾರಿ ಮಧ್ಯೆ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಉಪ ನಿರ್ದೇಶಕ ಹುದ್ದೆಗೆ ಶುಕ್ರವಾರ ಕಿತ್ತಾಟ ಆರಂಭಗೊಂಡಿದೆ.

Advertisement

ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿದ್ದ ಎನ್.ಎಚ್. ಹೊಸೂರ ಅವರನ್ನು ಇಲಾಖೆಯ ಯೋಜನೆಯೊಂದರ ಅನುದಾನ ದುರ್ಬಳಕೆ ಆರೋಪದಲ್ಲಿ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಇವರು ಜ.30 ರಂದು ಅಮಾನತು ಮಾಡಿದ್ದರು.

ಇದರಿಂದ ತೆರವಾದ ಉಪ ನಿರ್ದೇಶಕ ಹುದ್ದೆಗೆ ವಿಜಯಪುರ ಡಯಟ್ ಪ್ರಾಚಾರ್ಯೆ ಉಮಾದೇವಿ ಅವರನ್ನು ಪ್ರಭಾರಿಯಾಗಿ ನಿಯೋಜಿಸಿ ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ ಅದೇಶಿಸಿದ್ದರು‌. ಸಿಇಒ ಆದೇಶದಂತೆ ಉಮಾದೇವಿ ಫೆ.2 ರಂದು ಪ್ರಭಾರಿಯಾಗಿ ಉಪ ನಿರ್ದೇಶಕ ಹುದ್ದೆಯ ಅಧಿಕಾರ ಸ್ವೀಕರಿಸಿ, ಆಡಳಿತ ನಡೆಸುತ್ತಿದ್ದಾರೆ.

ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಕಲಬುರಗಿ ಪೀಠದ ಮೊರೆ ಹೋಗಿದ್ದ ಎನ್.ಎಚ್. ಹೊಸೂರ ತಮ್ಮನ್ನು ಅಮಾನತು ಮಾಡಿರುವ ಆದೇಶಕ್ಕೆ ಫೆ.7 ರಂದು ತಡೆಯಾಜ್ಞೆ ತಂದಿದ್ದಾರೆ.

ಈ ಆದೇಶ ಹಿಡಿದು ವಿಜಯಪುರ ಡಿಡಿಪಿಐ ಕಛೇರಿಗೆ ಬಂದು ನಾನೇ ಡಿಡಿಪಿಐ ಎಂದು ಕಛೇರಿ ಕುರ್ಚಿ ಮೇಲೆ ಕುಳಿತು, ನಾನೇ ಸಹಿ ಹಾಕುತ್ತೇನೆ ಕಡತ ತನ್ನಿ ಎಂದು ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದಾರೆ.

Advertisement

ಇತ್ತ ಡಿಡಿಪಿಐ ಹುದ್ದೆಯಲ್ಲಿ ಪ್ರಭಾರಿ ಆಡಳಿತ ನಡೆಸುತ್ತಿರುವ ಉಮಾದೇವಿ, ಆಡಳಿತ ನ್ಯಾಯ ಮಂಡಳಿ ಅಮಾನತು ಆದೇಶಕ್ಕೆ ತಡೆ ನೀಡಿದೆಯೇ ಹೊರತು, ಉಪ ನಿರ್ದೇಶಕ ಹುದ್ದೆಗೆ ಮರು ಅಧಿಕಾರ ಸ್ವೀಕಾರದ ಕುರಿತು ಹೇಳಿಲ್ಲ. ಹೀಗಾಗಿ ಈ ಕುರಿತು ಜಿ.ಪಂ. ಸಿಇಒ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಂದ ನಿರ್ದೇಶನ ಪಡೆದ ಬಳಿಕ ನಿರ್ಧಾರ ಮಾಡುವುದಾಗಿ ಹೇಳುತ್ತಿದ್ದಾರೆ‌.

ಇದರಿಂದಾಗಿ ವಿಜಯಪುರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹುದ್ದೆಗೆ ನಾ ಕೊಡೆ, ನಾ ಬಿಡೆ ಎಂಬಂತೆ ಕಿತ್ತಾಟ ಆರಂಭಗೊಂಡಿದೆ.

ಕಳೆದ ವರ್ಷ ಡಿಡಿಪಿಐ ಹುದ್ದೆಯಲ್ಲಿದ್ದ ಅಧಿಕಾರಿಯೊಬ್ಬರು ಭಡ್ತಿ ಪಡೆದರೂ ಬಿಡುಗಡೆ ಆಗಿರಲಿಲ್ಲ. ಆದರೆ ಇದೇ ಹುದ್ದೆಗೆ ವರ್ಗಾವಣೆ ಗೊಂಡು ಬಂದಿದ್ದ ಅಧಿಕಾರಿ ಅಧಿಕಾರ ಸ್ವೀಕಾರಕ್ಕೆ ಮುಂದಾಗಿದ್ದರು.

ಅದರೆ ಭಡ್ತಿ ಪಡೆದು ವರ್ಗವಾಣೆ ಹೊಂದಿದ್ದ ಅಧಿಕಾರಿ ವರ್ಗವಾಗಿ ಬಂದಿದ್ದ ಅಧಿಕಾರಿಗೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ್ದರು. ಪರಿಣಾಮ ಇಬ್ಬರ ಮಧ್ಯೆ ಜಗಳ ನಡೆದು, ಪೊಲೀಸರು ಮಧ್ಯಸ್ಥಿಕೆ ವಹಿಸುವ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಈ ಬೆಳವಣಿಗೆ ಮಾಸುವ ಮುನ್ನವೇ ಮತ್ತೊಮ್ಮೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next