Advertisement

ವರದಾನಿ ದರ್ಶನಕ್ಕೆ ಭಕ್ತರ ಕಾಲ್ನಡಿಗೆ

07:49 PM Nov 25, 2019 | Naveen |

„ಜಿ.ಎಸ್‌.ಕಮತರ
ವಿಜಯಪುರ:
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಆರಾಧ್ಯ ದೈವ ಎನಿಸಿರುವ 12ನೇ ಶತಮಾನದ ಮಹಾನ್‌ ಶರಣೆ ದಾನಮ್ಮದೇವಿ ದರ್ಶನಕ್ಕೆ ಭಕ್ತರು ಪರಿಸೆ ಆರಂಭಿಸಿದ್ದಾರೆ. ವರದಾನಿ ನೆಲೆಸಿರುವ ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನಲ್ಲಿರುವ ಗುಡ್ಡಾಪುರ ಕ್ಷೇತ್ರದ ಜಾತ್ರೆಗೆ ಲಕ್ಷಾಂತರ ಭಕ್ತರು ಪಾದಯಾತ್ರೆ ಹೊರಟಿದ್ದಾರೆ.

Advertisement

ರವಿವಾರ ಯತ್ನಾಳ ಮಾರ್ಗವಾಗಿ ಗುಡ್ಡಾಪುರ ವರದಾನಿ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಂದ ವಿಜಯಪುರ-ಗುಡ್ಡಾಪುರ ರಸ್ತೆ ಭಕ್ತ ಸಾಗರೋಪಾದಿಯಲ್ಲಿ ಕಾಣಿಸುತ್ತಿದೆ. ವರದಾನಿ ಭಕ್ತರ ದಟ್ಟಣೆಯಿಂದಾಗಿ ವಿಜಯಪುರದಿಂದ ಮಹಾರಾಷ್ಟ್ರದ ಜತ್ತ, ಸಂಖ, ತಿಕ್ಕುಂಡಿ ಹೀಗೆ ಗುಡ್ಡಾಪುರ ಮಾರ್ಗ ಮಧ್ಯದ ಗ್ರಾಮಗಳಿಗೆ ತೆರಳುವ ಈ ರಸ್ತೆಗಳು ವಾಹನ ಮಾತ್ರವಲ್ಲ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಅವಕಾಶವಿಲ್ಲದಂತೆ ಭಕ್ತರು ಇರುವೆ ಸಾಲಿನಂತೆ ಸಾಗುತ್ತಿದ್ದಾರೆ. ಶರಣೆ ದಾನಮ್ಮ ದೇವಿ ದರ್ಶನ ಪಡೆಯಲು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಮಾತ್ರವಲ್ಲ ಆರೇಳು ವರ್ಷದ ಮಕ್ಕಳು ಕೂಡ ವಯಸ್ಸಿನ ಮಿತಿ ಇಲ್ಲದಂತೆ ಎಲ್ಲ ವರ್ಗದ ಭಕ್ತರು ಗುಡ್ಡಾಪುರ ಶ್ರೀಕ್ಷೇತ್ರದತ್ತ ಹೆಜ್ಜೆ ಹಾಕಿದರು.

ಪಾದಯಾತ್ರೆ ಹೊರಟ ದಾನಮ್ಮದೇವಿ ಭಕ್ತರು ಬಿಸಿಲಿಗೆ ದಣಿದು ಹೈರಾಣು ಆಗಬಾರದೆಂದು ಪಾದಯಾತ್ರಿ ಭಕ್ತರು ಬಳಲಿಕೆ ನೀಗಲು ಸ್ಥಳೀಯ ಭಕ್ತರು ವಿಜಯಪುರ ನಗರದ ವಿವಿಧ ರಸ್ತೆಗಳಲ್ಲಿ ಸ್ವಯಂ ಪ್ರೇರಿತರಾಗಿ ಹತ್ತಾರು ಸಾವಿರ ರೂ. ಖರ್ಚು ಮಾಡಿ ಸ್ವಯಂ ಸೇವೆ ನೀಡುತ್ತಿದ್ದಾರೆ. ವಿಜಯಪುರ ಜಿಲ್ಲೆ ವಿವಿಧ ಭಾಗಗಳ ರಸ್ತೆಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಟೆಂಟ್‌ ಹಾಕಿಕೊಂಡು ಪಾದಯಾತ್ರಿ ಭಕ್ತರಿಗೆ ಶ್ರದ್ಧಾ ಭಕ್ತಿಯ ಸೇವೆ ನೀಡುತ್ತಿದ್ದಾರೆ.

ಸ್ಥಳೀಯ ಮಹಿಳೆಯರು ಪಾದಯಾತ್ರಿ ಸುಮಂಗಲೆಯರಿಗೆ ಅರಿಶಿಣ-ಕುಂಕುಮ, ಎಲೆ-ಅಡಿಕೆ, ಉತ್ತುತ್ತಿ, ಕಲ್ಲು ಸಕ್ಕರೆ, ಹಸಿರು ಬಳೆ, ಹೂ, ಹಣ್ಣು, ಖಣ ಸಹಿತ ಉಡಿ ತುಂಬುವ ಮೂಲಕ ಶುಭಾಶಯ ವರದಾನಿ ದರ್ಶನಕ್ಕೆ ತೆರಳುವ ಭಕ್ತರಿಗೆ ಶುಭಾಶಯ ಕೋರುತ್ತಿದ್ದಾರೆ.

ಪಾದಯಾತ್ರೆ ಬಾಲ ಭಕ್ತರಿಗೆ, ಮಕ್ಕಳಿಗೆ ಹಾಲು-ಮಜ್ಜಿಗೆ, ತಂಪು ಪಾನೀಯ, ಖರ್ಜೂರ, ಗೋಡಂಬಿ, ಒಣದ್ರಾಕ್ಷಿಯಂಥ ಪೌಷ್ಟಿಕ ಆಹಾರ, ಬಾಳೆ, ಸೇಬು, ಮೋಸಂಬಿಯಂಥ ಹಣ್ಣುಗಳು, ಕುಡಿಯಲು ಶುದ್ಧ ನೀರು, ಚಿತ್ರಾನ್ನ, ಮೊಸರನ್ನ, ಅನ್ನ-ಸಾಂಬಾರ, ಸಿಹಿ ತಿಂಡಿಗಳಾದ ಬೂಂದಿ, ಜಿಲೇಬಿ, ಬಾದೂಶಾ, ಮೈಸೂರು ಪಾಕ್‌ ಹೀಗೆ ಬಗೆ ಬಗೆಯ ಖಾದ್ಯ ಸಹಿತ ಅನ್ನಸಂತರ್ಪಣೆ ನಡೆಯುತ್ತಿದೆ.

Advertisement

ಮತ್ತೂಂದೆಡೆ ಹಗಲು-ರಾತ್ರಿ ಎನ್ನದೇ ಪಾದಯಾತ್ರೆಯಿಂದ ಬಳಲಿರುವ ಭಕ್ತರಿಗೆ ವಿಶ್ರಾಂತಿಗೂ ಅಲ್ಲಲ್ಲಿ ವ್ಯವಸ್ಥೆ ಮಾಡಿದೆ. ಪಾದಯಾತ್ರಿಗಳ ಕಾಲು ನೋವು ನಿವಾರಿಸಲು ಕೈ-ಕಾಲು ಮಸಾಜ್‌ ಮಾಡುತ್ತಿದ್ದಾರೆ. ದಣಿದ ಪಾದಯಾತ್ರಿಗಳಿಗೆ ಅಲ್ಲಲ್ಲಿ ಉಚಿತ ಆರೋಗ್ಯ ತಪಾಸಣೆ, ಮಸಾಜ್‌ ಸಹಿತ ಉಚಿತ ಚಿಕಿತ್ಸೆಯ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next