ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ವೃದ್ಧರು ಸಾವಿಗೀಡಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿಂದ 9 ಜನರು ಮೃತಪಟ್ಟಂತಾಗಿದೆ.
ಕೋವಿಡ್ ಸೋಂಕಿತರಾಗಿದ್ದ 85 ವರ್ಷದ ಪಿ10320 ಹಾಗೂ 52 ವರ್ಷದ ಪಿ14497 ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ. ಸೋಂಕಿತರ ಸಾವಿನ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ವಿಜಯಪುರ ನಗರದ ಹವೇಲಿ ಗಲ್ಲಿ ನಿವಾಸಿಯಾದ 52 ವರ್ಷದ ಕೋವಿಡ್ ಪಾಸಿಟಿವ್ ವ್ಯಕ್ತಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿದ್ದ. ಜೂ. 22ರಂದು ತೀವ್ರ ಉಸಿರಾಟ ತೊಂದರೆ, ಜ್ವರ ಮತ್ತು ನಿಶ್ಯಕ್ತಿ, ಸಕ್ಕರೆ ಕಾಯಿಲೆ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲಿ ಕೋವಿಡ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು.
ಟ್ರೂನ್ಯಾಟ್, ಆರ್‌ಟಿಡಿಸಿಆರ್ ಅಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತೀವ್ರ ರಕ್ತದೊತ್ತಡ, ಟೈಪ್ ಟು ಸಕ್ಕರೆ ಕಾಯಿಲೆ, ಐಎಚ್‌ಡಿ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂ. 26ರಂದೇ ಮೃತಪಟ್ಟಿದ್ದು ಶಿಷ್ಟಾಚಾರದಂತೆ ಶವಸಂಸ್ಕಾರ ಮಾಡಿರುವುದಾಗಿ ವಿವರಿಸಿದ್ದಾರೆ.
ಸದರಿ ಸೋಂಕಿತ ಮೃತಪಟ್ಟ ಕಾರಣ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ನಿಗದಿತ ವಿಭಾಗವನ್ನು ಶುಚಿಗೊಳಿಸಿ, ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೇ 200 ಸಿಬ್ಬಂದಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು ಸಂಬಂ ಧಿಸಿದವರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ ವಿವರ ನೀಡಿದ್ದಾರೆ.
ಇನ್ನು ಮೃತ ಇನ್ನೋರ್ವ 85 ವರ್ಷದ ವೃದ್ಧೆ ನೆಗೆಡಿ, ಕೆಮ್ಮು, ಜ್ವರ ಲಕ್ಷಣ ಹೊಂದಿದ್ದರು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಅನ್ವಯ ಕೋವಿಡ್ ಕೋವಿಡ್ ಸೋಂಕು ಇರುವುದು ದೃಢಪಟ್ಟು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಕುಟುಂಬದ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ವಿವರ ನೀಡಿದರು.
ಸದರಿ ಸೋಂಕಿತ ಮೃತ ವೃದ್ಧೆ ಜೂ. 22ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಅದರಂತೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರೂ ಸ್ಥಿರವಾಗಿದ್ದ ಇವರ ಆರೋಗ್ಯ ಜೂ. 27ರಂದು ಬಿಗಡಾಯಿಸಿದ್ದು ಐಸಿಯು ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಜೂ. 29ರಂದು ಅವರ ಕುಟುಂಬಸ್ಥರ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಡಿಸಿ ವಿವರಿಸಿದ್ದಾರೆ.